ಉಡುಪಿ : ಪಾನ್ ಸ್ಟಾಲ್ನಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಪಡುಬಿದ್ರಿ ಪೊಲೀಸರು ದಾಳಿ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿ 625.83 ಗ್ರಾಂ ಗಾಂಜಾ ಹಾಗೂ ಮಾರಾಟದಿಂದ ಸಂಗ್ರಹಿಸಲಾಗಿದ್ದ ನಗದು ವಶಪಡಿಸಿಕೊಂಡಿದ್ದಾರೆ. ಜುಲೈ 22ರಂದು ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಪು ತಾಲೂಕಿನ ಬಡಾ ಗ್ರಾಮದ ಎರ್ಮಾಳು ಪ್ರದೇಶದಲ್ಲಿರುವ ಅನೀಲಾ ಪಾನ್ ಸ್ಟಾಲ್ನಲ್ಲಿ ಗಿರಾಕಿಗಳಿಗೆ ಅಕ್ರಮವಾಗಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಅಂಗಡಿ ನಡೆಸುತ್ತಿದ್ದ ಅನಿಲ್ ಎಂಬಾತನನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿದ್ದ 625.83 ಗ್ರಾಂ ಗಾಂಜಾ ಹಾಗೂ ಗಾಂಜಾ ಮಾರಾಟದಿಂದ ಬಂದಿದ್ದ ರೂ.600 ನಗದು ಪತ್ತೆಯಾಗಿ ವಶಪಡಿಸಿಕೊಳ್ಳಲಾಯಿತು.

ಈ ಸಂಬಂಧ ಆರೋಪಿ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್. ವಿಜಯಪ್ರಸಾದ್ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ಮಾರ್ಗದರ್ಶನದಲ್ಲಿ, ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್ಐ ಶಕ್ತಿವೇಲು ಹಾಗೂ ಅನಿಲ್ ಕುಮಾರ್ ಟಿ. ನಾಯಕ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ದಾಳಿಯಲ್ಲಿ ಎಎಸ್ಐ ಗಿರೀಶ್ ಯು.ಆರ್., ಹೆಡ್ ಕಾನ್ಸ್ಟೆಬಲ್ಗಳಾದ ಕೃಷ್ಣಪ್ರಸಾದ್, ಮಿಥುನ್, ಪೊಲೀಸ್ ಕಾನ್ಸ್ಟೆಬಲ್ಗಳಾದ ಸಂದೇಶ್ ಭಂಡಾರಿ ಮತ್ತು ರಾಘವೇಂದ್ರ ಭಾಗವಹಿಸಿದ್ದರು. ಉಡುಪಿ ಜಿಲ್ಲಾ ಸೋಕೋ ಅಧಿಕಾರಿಗಳು ಸ್ಥಳದಲ್ಲೇ ಮಾದಕ ವಸ್ತುವಿನ ಪ್ರಾಥಮಿಕ ಪರೀಕ್ಷೆ ನಡೆಸಿ ತನಿಖಾಧಿಕಾರಿಗಳಿಗೆ ತಾಂತ್ರಿಕ ಸಹಕಾರ ನೀಡಿದರು. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


