ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮಾರುಕಟ್ಟೆ ಬೆಲೆ ಪರಿಷ್ಕರಣೆ ಆಗದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯ ಮೇಲೆ ಶೇ.3ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.

2026–27ನೇ ಸಾಲಿನ ಆಸ್ತಿ ತೆರಿಗೆಯನ್ನು 2025–26ರ ತೆರಿಗೆಯ ಮೇಲೆ ಶೇ.3 ಹೆಚ್ಚಳದೊಂದಿಗೆ ಪಾವತಿಸಬೇಕಾಗುತ್ತದೆ. ಕಟ್ಟಡ ಹಾಗೂ ಖಾಲಿ ನಿವೇಶನಗಳ ಮಾಲೀಕರು ಮತ್ತು ಅಧಿಭೋಗದಾರರು ಏಪ್ರಿಲ್ 1ರಿಂದ 30ರೊಳಗೆ ತೆರಿಗೆ ಪಾವತಿಸಿದಲ್ಲಿ ಶೇ.5ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಮೇ 1ರಿಂದ ಜೂನ್ 30ರವರೆಗೆ ದಂಡವಿಲ್ಲದೆ ತೆರಿಗೆ ಪಾವತಿಸಲು ಅವಕಾಶವಿದೆ. ಜುಲೈ 1 ನಂತರ ತೆರಿಗೆ ಪಾವತಿಸಿದರೆ ಪ್ರತಿ ತಿಂಗಳು ಶೇ.2ರಷ್ಟು ದಂಡ ವಿಧಿಸಲಾಗುತ್ತದೆ.

ಹಿಂದಿನ ಅವಧಿಯ ಆಸ್ತಿ ತೆರಿಗೆಯನ್ನು ಪಾವತಿಸದೇ ಇರುವವರು ಕೂಡ ಶೇ.2ರಷ್ಟು ದಂಡದೊಂದಿಗೆ ತೆರಿಗೆ ಪಾವತಿಸಿ ನಗರಸಭೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಉಡುಪಿ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.



