ಉಡುಪಿ : ಕಾಲೇಜು ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಗೂಡ್ಸ್ ಟೆಂಪೊ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ 22 ವರ್ಷದ ವಿದ್ಯಾರ್ಥಿನಿ ಪ್ರೇಕ್ಷಾ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದುರ್ಮರಣ ಹೊಂದಿರುವ ದಾರುಣ ಘಟನೆ ಪಡುಬಿದ್ರಿ ಸಮೀಪ ನಡೆದಿದೆ.

ನಡ್ಸಾಲು ಬಿಲ್ಲಿ ತೋಟ ನಿವಾಸಿ ಪ್ರೇಕ್ಷಾ, ವಾಮಂಜೂರು ಕರಾವಳಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಪರೀಕ್ಷೆ ಮುಗಿಸಿ ಮನೆಗೆ ಹೊರಟಿದ್ದಾಗ ಮಂಗಳೂರು ದಿಕ್ಕಿಗೆ ಹೋಗುವ ಸರ್ವಿಸ್ ರಸ್ತೆಯಲ್ಲಿ ನಿಂತಿದ್ದ ಬಸ್ಸನ್ನು ಗಮನಿಸುತ್ತಾ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ದುರಂತ ಸಂಭವಿಸಿದೆ.

ಉಡುಪಿ ದಿಕ್ಕಿನಿಂದ ವೇಗವಾಗಿ ಬಂದ ನಂದಿನಿ ಗೂಡ್ಸ್ ಟೆಂಪೊ ನೇರವಾಗಿ ಪ್ರೇಕ್ಷಾರಿಗೆ ಢಿಕ್ಕಿ ಹೊಡೆದಿದ್ದು, ತಲೆಗೆ ಗಂಭೀರ ಗಾಯಗಳಾಗಿದ್ದುವು. ಸ್ಥಳೀಯರು ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



