ಉಡುಪಿ: ಉಡುಪಿ ಜಿಲ್ಲೆಯ ಪಡುಬಿದ್ರಿ–ನಂದಿಕೂರು ಪ್ರದೇಶದಲ್ಲಿ ಯುವಕರು ಸಂಘಟಿತರಾಗಿ ಸೇರಿಕೊಂಡು ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆ ನಡೆಸುತ್ತಿರುವ ಮಾಹಿತಿಯ ಮೇರೆಗೆ ಪಡುಬಿದ್ರಿ ಪೊಲೀಸರು ದಾಳಿ ನಡೆಸಿ ಒರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ದ.ಕ. ಜಿಲ್ಲೆ ಮೂಲ್ಕಿ ನಿವಾಸಿ ಸುನಿಲ್ ಕುಮಾರ್ (31) ಎಂದು ಗುರುತಿಸಲಾಗಿದೆ.

ಪೊಲೀಸರಿಗೆ ದೊರೆತ ಮಾಹಿತಿಯ ಮೇರೆಗೆ ನಂದಿಕೂರು ಇಂಡಸ್ಟ್ರಿಯಲ್ ಏರಿಯಾದಲ್ಲಿ ತಪಾಸಣೆ ನಡೆಸಿದಾಗ, ಸುನಿಲ್ ಕುಮಾರ್ ಇಬ್ಬರು ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು ಯಾರೊಂದಿಗೋ ಮಾತನಾಡುತ್ತಾ ಬೆಟ್ಟಿಂಗ್ ಮಾಡುತ್ತಿದ್ದನ್ನು ಪೊಲೀಸರು ಪತ್ತೆ ಹಚ್ಚಿದರು. ಬಂಧಿಸಲು ಯತ್ನಿಸಿದಾಗ ಆರೋಪಿ ಓಡಲು ಯತ್ನಿಸಿದರೂ, ಹಿಡಿದು ವಿಚಾರಣೆ ನಡೆಸಿದಾಗ, ಪಾರ್ಕರ್ ಕ್ರಿಕೆಟ್ ಬೆಟ್ಟಿಂಗ್ ವೆಬ್‌ಸೈಟ್ ಮೂಲಕ ಅಕ್ರಮ ದಂಧೆಯಲ್ಲಿ ತೊಡಗಿದ್ದೇನೆ, ಸುದೇಶ್ ಶೆಟ್ಟಿ, ಸಚಿನ್ ಹಾಗೂ ಇತರರೊಂದಿಗೆ ಸೇರಿಕೊಂಡು ಸಂಘಟಿತವಾಗಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದೇವೆ. ನೇಪಾಳದಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಸಂಬಂಧಿಸಿ ಬೆಟ್ಟಿಂಗ್ ಮಾಡುತ್ತಿರುದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿಯಿಂದ 2 ಮೊಬೈಲ್ ಫೋನ್‌ಗಳು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಸುನಿಲ್ ಕುಮಾರ್, ಸುದೇಶ್ ಶೆಟ್ಟಿ, ಸಚಿನ್ ಮತ್ತು ಇತರರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



