ಉಡುಪಿ: ಪೂಜ್ಯ ಪುತ್ತಿಗೆ ಶ್ರೀಪಾದರು ವಿದೇಶಗಳಲ್ಲಿ ಸ್ಥಾಪಿಸಿದ ವಿವಿಧ ಮಂದಿರಗಳಲ್ಲಿ ಈ ಬಾರಿ ದೀಪಾವಳಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಹಾಗೂ ವೈಭವದಿಂದ ಆಚರಿಸಲಾಯಿತು.

ಅಮೆರಿಕಾದ ಫೀನಿಕ್ಸ್ನ ಶ್ರೀ ಪುತ್ತಿಗೆ ಮಠದ ಶ್ರೀ ವೆಂಕಟಕೃಷ್ಣ ದೇಗುಲದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿ ಸಂಭ್ರಮಿಸಿದರು. ಬೆಳಿಗ್ಗೆ ಶ್ರೀನಿವಾಸ ದೇವರಿಗೆ ಮಹಾಭಿಷೇಕ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನೆರವೇರಿತು.

ಸಂಜೆಯ ವೇಳೆಯಲ್ಲಿ ಬಲೀಂದ್ರ ಪೂಜೆ, ಮಹಾ ಪ್ರಸಾದ ವಿತರಣೆ ಹಾಗೂ ಸುಡುಮದ್ದು ಪ್ರದರ್ಶನ ನಡೆಯಿತು. ಈ ವೇಳೆ ದೇವಾಲಯದ ಆವರಣವು ಭಕ್ತಿ, ಬೆಳಕು ಮತ್ತು ಉತ್ಸಾಹದ ಮೆರವಣಿಗೆಯಂತೆಯೇ ಕಾಣಿಸಿತು.

ಶ್ರೀಪಾದರು ವಿದೇಶಗಳಲ್ಲಿ ಸ್ಥಾಪಿಸಿದ ಎಲ್ಲ ದೇವಾಲಯಗಳಲ್ಲಿಯೂ ಇದೇ ರೀತಿಯಾಗಿ ದೀಪಾವಳಿ ಹಬ್ಬವನ್ನು ಸಂಭ್ರಮಪೂರ್ಣವಾಗಿ ಆಚರಿಸಲಾಗುತ್ತಿದ್ದು, ಭಾರತೀಯ ಸಂಸ್ಕೃತಿಯ ವೈಭವವನ್ನು ವಿದೇಶದಲ್ಲಿಯೂ ಜೀವಂತವಾಗಿಡುವ ಶ್ರಮದಲ್ಲಿ ಪುತ್ತಿಗೆ ಮಠ ಮುಂಚೂಣಿಯಲ್ಲಿದೆ.
