ಉಡುಪಿ : ಉಡುಪಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಸುಮಾರು ವರ್ಷಗಳ ಕಾಲ ಮುಖ್ಯ ಗ್ರಂಥಾಲಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಉಪನಿರ್ದೇಶಕರಾಗಿ ಶಿವಮೊಗ್ಗಕ್ಕೆ ಮುಂಬಡ್ತಿ ಪಡೆದ ನಳಿನಿ ಜಿ.ಐ. ಅವರಿಗೆ ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದಿAದ ಅಭಿನಂದನೆ ಹಾಗೂ ಬೀಳ್ಕೊಡುಗೆ ಸಮಾರಂಭ ಉಡುಪಿ ಅಜ್ಜರಕಾಡಿನ ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ನಡೆಯಿತು.

ಗ್ರಂಥಾಲಯ ಇಲಾಖೆ ಬೆಂಗಳೂರು ಇದರ ನಿವೃತ್ತ ಉಪನಿರ್ದೇಶಕ ವೆಂಕಟೇಶ್ ಸಿ.ಜೆ. ಅವರು ಅಭಿನಂದನಾ ನುಡಿಗಳನ್ನಾಡಿ, ಉಡುಪಿ ನಗರ ಕೇಂದ್ರ ಹಾಗೂ ಜಿಲ್ಲಾಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಯಾಗಿ ಒಟ್ಟು 18 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನಳಿನಿ ಜಿ.ಐ. ಅವರ ಸಾಧನೆ ಅಭಿನಂದನೀಯ. ಇದೀಗ ಶಿವಮೊಗ್ಗ ಜಿಲ್ಲಾ ಗ್ರಂಥಾಲಯಕ್ಕೆ ಉಪನಿರ್ದೇಶಕರಾಗಿ ವರ್ಗಾವಣೆ ಹೊಂದಿರುವ ಅವರು ಅಲ್ಲಿಯೂ ಅತ್ಯುತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸಿದರು. ಅಭಿನಂದನೆ ಸ್ವೀಕರಿಸಿ ನಳಿನಿ ಜಿ.ಐ.ಅವರು ಮಾತನಾಡಿ, 18 ವರ್ಷಗಳ ಕಾಲ ಉಡುಪಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ. ಅದರಲ್ಲೂ ನನ್ನಾವಧಿಯಲ್ಲಿ ಸುಮಾರು 5.18 ಕೋಟಿ ವೆಚ್ಚದಲ್ಲಿ ಅಜ್ಜರಕಾಡು ಡಿಜಿಟಲ್ ಗ್ರಂಥಾಲಯ ನಿರ್ಮಾಣಗೊಂಡಿರುವುದು ವೃತ್ತಿ ಜೀವನದಲ್ಲಿಯೇ ಅತ್ಯಂತ ಖುಷಿಕೊಟ್ಟ ಸಂಗತಿ. ಈ ಎಲ್ಲಾ ಸಾಧನೆಗಳಿಗೆ ಸಹಕಾರ ನೀಡಿದ ಜಿಲ್ಲಾಧಿಕಾರಿಗಳು ,ಗ್ರಂಥಾಲಯ ಪ್ರಾಧಿಕಾರದ ಸದಸ್ಯರು, ನಗರ ಹಾಗೂ ಜಿಲ್ಲಾ ಗ್ರಂಥಾಲಯದ ಸಿಬಂದಿಗಳು, ಜನಪ್ರತಿನಿಧಿಗಳು ಹಾಗೂ ಓದುಗರಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿ ಅವರು ತಿಳಿಸಿದರು.

ಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರಭಾರ ಮುಖ್ಯ ಗ್ರಂಥಾಲಯಾಧಿಕಾರಿ ವನಿತಾ ಕೆ. ಶುಭಾಶಂಸನೆಗೈದರು, ನಗರಕೇಂದ್ರ ಗ್ರಂಥಾಲಯದ ಪ್ರಭಾರ ಮುಖ್ಯ ಗ್ರಂಥಾಲಯ ಅಧಿಕಾರಿ ನಮಿತಾ ಬಿ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಸಂಘದ ನಿವೃತ್ತ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಹಿರಿಯ ಉಪನಿರ್ದೇಶಕರು ಹಾಗೂ ಲೆಕ್ಕಪರಿಶೋಧಕರುಜಿಲ್ಲಾ ಖಜಾನೆ ಉಪನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ, ಉಡುಪಿ ನಗರ ಸಭೆ, ಉಡುಪಿ ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ವಿವಿಧ ಶಾಖಾ ಸಿಬ್ಬಂದಿಗಳು, ಮೇಲ್ವಿಚಾರಕರು ಉಪಸ್ಥಿತರಿದ್ದರು. ನಗರಕೇಂದ್ರ ಗ್ರಂಥಾಲಯದ ಪ್ರಥಮ ಧರ್ಜೆ ಸಹಾಯಕಿ ಶಕುಂತಳಾ ಕುಂದರ್ ಪರಿಚಯಿಸಿದರು. ನಗರಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ರಂಜಿತಾ ಸಿ. ಸ್ವಾಗತಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರಥಮ ದರ್ಜೆ ಸಹಾಯಕಿ ಪ್ರೇಮಾ ಎಂ. ಕಾರ್ಯಕ್ರಮ ನಿರೂಪಿಸಿದರು. ಹಾಗೂ ಗ್ರಂಥಾಲಯ ಸಹಾಯಕಿ ಸುನೀತಾ ಬಿ.ಎಸ್. ವಂದಿಸಿದರು.



