ಉಡುಪಿ : ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂ. ಪಡೆದು ನಕಲಿ ಚಿನ್ನ ನೀಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಗೋಪಾಲ ಎಂಬವರನ್ನು ಸಂಪರ್ಕಿಸಿದ ಆರೋಪಿಗಳು, 150 ಗ್ರಾಂ ಚಿನ್ನವನ್ನು ಕಡಿಮೆ ದರದಲ್ಲಿ ನೀಡುವುದಾಗಿ ಹೇಳಿ ಸಿದ್ದಾಪುರದ ಕಮಲಶಿಲೆ ರಸ್ತೆಯಲ್ಲಿ 5 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿದ್ದರು. ಬಳಿಕ ನಕಲಿ ಚಿನ್ನ ನೀಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ, ಚಿತ್ರದುರ್ಗ ಜಿಲ್ಲೆಯ ನಿವಾಸಿ ಜಯಪ್ರಕಾಶ್ ಡಿ. ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯಿಂದ ವಂಚನೆಯ ಮೂಲಕ ಪಡೆದ 4.50 ಲಕ್ಷ ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಅಗತ್ಯ ತನಿಖೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



