ಉಡುಪಿ : ಕರ್ನಾಟಕ ರಾಜ್ಯದ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಮೇಲೆ ಕೆಲವು ಮಂದಿ ಯೂಟ್ಯೂಬರ್ಗಳ ಅಪಪ್ರಚಾರದಿಂದ ಹಿಂದೂ ಧಾರ್ಮಿಕ ಕೇಂದ್ರದ ಮೇಲಿರುವ ಪಾವಿತ್ರತೆಗೆ ಧಕ್ಕೆಯಾಗುತ್ತಿದ್ದು, ಇದರ ಹಿಂದೆ ವಿದೇಶಿ ಹಣ ಹರಿದು ಬಂದ ಗುಮಾನಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇ.ಡಿ ಮೂಲಕ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.

ಮಂಜುನಾಥ ಸ್ವಾಮಿ ದೇವಸ್ಥಾನದ ವಿರುದ್ಧ ಬಾರಿ ಷಡ್ಯಂತರ ನಡೆದಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಬಹಿರಂಗ ಹೇಳಿಕೆ ನೀಡಿದ್ದು, ಎಡಪಂಥಿಯರ ಒತ್ತಡಕ್ಕೆ ಎಸ್.ಐ.ಟಿ ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಅನಾಮದೇಯ ಆರೋಪಿಯನ್ನು ನಂಬಿ ಎಸ್.ಐ.ಟಿ ಮೂಲಕ ಆತ ಕೈ ತೋರಿಸಿದೆಡೆ ಹೊಂಡಾ ಗುಂಡಿಗಳನ್ನು ತೋಡಿ ಗೊಂದಲ ನಿರ್ಮಿಸಿದೆ. ಹಿಂದೂಗಳ ಆರಾಧ್ಯ ದೈವ ಬಾಹುಬಲಿ ಬುಡಕ್ಕು ಜೆಸಿಪಿ ನುಗ್ಗಿಸಿ ಭಕ್ತಾದಿಗಳು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಅನಾಮದೇಯ ಆರೋಪಿ, ನನಗೆ ತಲೆ ಬುರುಡೆ ಕೊಟ್ಟು ಇಂತಹ ಕೆಲಸಗಳಿಗೆ ನಿಯೋಜಿಸಲಾಗಿದೆ ಎಂದು ಪೊಲೀಸರಿಗೆ ತಿಳಿಸಿದ ಬಗ್ಗೆ ಸುದ್ದಿ ಬರುತ್ತಿದೆ.

ಈ ಹಿನ್ನೆಲೆಯಲ್ಲಿ ನನ್ನ ಪತ್ರವನ್ನು ಗಂಭೀರವಾಗಿ ಗಮನಿಸಿ, ಈ ಷಡ್ಯಂತ್ರದ ಹಿಂದೆ ವಿದೇಶಿ ಹಣ ಸಂಗ್ರಹಿಸಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಕಳಂಕ ತರಲು ಯತ್ನಿಸಿದ ವ್ಯಕ್ತಿಗಳ ಬಗ್ಗೆ ಇ.ಡಿ ಮೂಲಕ ತನಿಖೆ ನಡೆಸಿ, ಕ್ರಮ ಜರುಗಿಸಬೇಕೆಂದು ಸಂಸದ ಕೋಟ, ಕೇಂದ್ರ ಗ್ರಹ ಮಂತ್ರಿ ಅಮಿತ್ಷಾ ರವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.


