ಉಡುಪಿ : ರಾಷ್ಟ್ರ ರಾಜಧಾನಿ ದೆಹಲಿ ಕೆಂಪು ಕೋಟೆಯ ಬಳಿ ಸಂಭವಿಸಿದ ಕಾರು ಸ್ಫೋಟ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಈ ಧಾಳಿಯ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಮಲ್ಪೆ ಬಂದರು ಪ್ರದೇಶದಲ್ಲಿಯೂ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ.

ಏಷ್ಯಾದಲ್ಲೇ ಅತಿದೊಡ್ಡ ಸರ್ವ ಋತು ಬಂದರಾಗಿರುವ ಮಲ್ಪೆ ಬಂದರು ದಿನವೂ ನೂರಾರು ಮೀನುಗಾರಿಕಾ ಮತ್ತು ಖಾಸಗಿ ಬೋಟ್ಗಳ ಆಗಮನ ನಿರ್ಗಮನವಿರುತ್ತದೆ.

ಈ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪೊಲೀಸರು ಆಳ ಸಮುದ್ರದವರೆಗೂ ಕಟ್ಟೆಚ್ಚರದ ಗಸ್ತು ಆರಂಭಿಸಿದ್ದಾರೆ. ನಿನ್ನೆ ರಾತ್ರಿಯಿಂದ ಪೊಲೀಸರು ಗಸ್ತು ಹೆಚ್ಚಿಸಿದ್ದು, ವಿಶೇಷವಾಗಿ ಅಪರಿಚಿತ ಬೋಟ್ಗಳ ಮೇಲೆ ಕಣ್ಣಿಟ್ಟಿದ್ದಾರೆ. ತಮಿಳುನಾಡು ಹಾಗೂ ಕೇರಳದಿಂದ ಬಂದಿರುವ ಬೋಟ್ಗಳ ದಾಖಲೆಗಳನ್ನು ವಿಶೇಷ ಪರಿಶೀಲನೆಗೆ ಒಳಪಡಿಸಲಾಗಿದೆ.

ಶಸ್ತ್ರಸಜ್ಜಿತ ಕರಾವಳಿ ಕಾವಲು ಸಿಬ್ಬಂದಿ ಬೋಟ್ಗಳನ್ನು ಹತ್ತಿ ಪರಿಶೀಲನೆ ನಡೆಸುತ್ತಿದ್ದು, ಯಾವುದೇ ಶಂಕಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.ಕರಾವಳಿ ಸುರಕ್ಷತಾ ವಲಯದಲ್ಲಿ ಸಿಸಿಟಿವಿ ನಿಗಾವ್ಯವಸ್ಥೆ ಬಲಪಡಿಸಲಾಗಿದ್ದು, ಬಂದರು ಪ್ರವೇಶಿಸುವ ಎಲ್ಲ ವಾಹನಗಳ ದಾಖಲೆಗಳನ್ನೂ ನಿಖರವಾಗಿ ಪರಿಶೀಲಿಸಲಾಗುತ್ತಿದೆ.



