ಉಡುಪಿ: ಜನಸಾಮಾನ್ಯರು ದುಷ್ಚಟಗಳಿಂದ ದೂರವಿದ್ದಾಗ ಮಾತ್ರ ಉತ್ತಮ ಆರೋಗ್ಯ ಹೊಂದಿ, ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮೂಳೆ ರೋಗ ತಜ್ಞ ಹಾಗೂ ಭಾರತೀಯ ವೈದ್ಯಕೀಯ ಸಂಘ (ಐ.ಎಂ.ಎ) ಉಡುಪಿ ಕರಾವಳಿ ಅಧ್ಯಕ್ಷ ಡಾ.ಕೆ ಸುರೇಶ್ ಶೆಣೈ ಹೇಳಿದರು. ಅವರು ನಗರದ ಐ.ಎಂ.ಎ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ, ಭಾರತೀಯ ವೈದ್ಯಕೀಯ ಸಂಘ (ಐ.ಎಂ.ಎ) ಉಡುಪಿ ಕರಾವಳಿ, ವಿದ್ಯಾರತ್ನ ನರ್ಸಿಂಗ್ ಕಾಲೇಜು ಉಡುಪಿ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಜನ್ಮದಿನದ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ, ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.

ಡಾ.ಮಹಾಂತ ಶಿವಯೋಗಿ ಸ್ವಾಮೀಜಿಗಳು 1975 ರ ಸಾಲಿನಲ್ಲಿ ಜೋಳಿಗೆ ಅಭಿಯಾನದ ಮೂಲಕ ಜನರಲ್ಲಿದ್ದ ದುಶ್ಚಟಗಳನ್ನು ಭಿಕ್ಷೆಯ ರೀತಿಯಲ್ಲಿ ಜೋಳಿಗೆಗೆ ಹಾಕಿಸಿಕೊಂಡು ಅವರಲ್ಲಿ ಮನಃಪರಿರ್ತಿಸಿ, ಪ್ರತಿಜ್ಞೆ ಪಡೆದು ದುಶ್ಚಟಗಳಿಂದ ದೂರ ಉಳಿಯುವಂತೆ ಮಾಡಿ, ವ್ಯಸನಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ನೆಮ್ಮದಿಯ ಜೀವನ ಮಾಡುವ ಸಮಾಜಮುಖಿ ಕಾರ್ಯವನ್ನು ಮಾಡಿದರು. ಅವರ ಜನ್ಮದಿನವನ್ನು ಸರ್ಕಾರ ವ್ಯಸನಮುಕ್ತ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ಒಂದು ಉತ್ತಮ ಕಾರ್ಯಕ್ರಮವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ.ಎ.ವಿ ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ.ಪಿ.ವಿ ಭಂಡಾರಿ ಉಪನ್ಯಾಸ ನೀಡಿ ಮಾತನಾಡಿ, ಒಮ್ಮೆ ದುಶ್ಚಟದ ಚಕ್ರವ್ಯೂಹದಲ್ಲಿ ಸಿಲುಕಿದರೆ ಅದರಿಂದ ಹೊರಬರುವುದು ಕಷ್ಟ. ಅನೇಕ ಜನರು ದುಶ್ಚಟಗಳಿಂದಲೇ ತಮ್ಮ ಪ್ರಾಣಗಳನ್ನು ಕಳೆದುಕೊಂಡರೆ, ಅನೇಕರು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಾರೆ. ವ್ಯಸನಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಒಬ್ಬರಿಂದಲೇ ಸಮಾಜ ಬದಲಾವಣೆ ಮಾಡಲು ಆಗುವುದಿಲ್ಲ ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಮಹಾಂತ ಶಿವಯೋಗಿ ಸ್ವಾಮೀಜಿಗಳು ಜನರಲ್ಲಿದ್ದಂತಹ ದುಶ್ಚಟಗಳನ್ನೆ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ಬಂದಂತಹ ಸಂದರ್ಭದಲ್ಲಿ ನೂರಾರು ಗಂಜಿಕೇಂದ್ರಗಳನ್ನು ಆರಂಭಿಸಿ, ದಾಸೋಹ ಹಾಗೂ ಗೋಶಾಲೆಗಳನ್ನು ಆರಂಭಿಸಿದರು. ದೇವದಾಸಿ ವಿಮೋಚನೆಗೆ, ವಿಧವೆಯರಿಗೆ ಕಾಯಕ ಕೈಗೊಳ್ಳಲು ಅನುಕೂಲವಾಗುವಂತೆ ಕಾಯಕ ಸಂಜೀವಿನಿ ಸಂಸ್ಥೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದರು. ಅಲ್ಲದೇ ಮಠದ ನೂರಾರು ಎಕರೆ ಜಮೀನನ್ನು ರೈತರು ಕೃಷಿ ಮಾಡಲು ನೀಡಿದರು ಎಂದರು.

ವಿದ್ಯಾರತ್ನ ಕಾಲೇಜಿನ ಪ್ರಾಂಶುಪಾಲೆ ಡಾ.ಅನಿತಾ ಸಿ.ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಡುಪಿ ಸಿಟಿ ಎಜುಕೇಷನ್ ಟ್ರಸ್ಟ್ನ ಆಡಳಿತ ಅಧಿಕಾರಿ ರವಿಪಾಲನ್, ವಿದ್ಯಾರತ್ನ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಎಂ.ಕೆ ರಮೇಶ್, ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ಉಪನ್ಯಾಸಕರುಗಳು, ವಿದ್ಯಾರ್ಥಿಗಳು, ವಾರ್ತಾ ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸಹಾಯಕ ಉಪನ್ಯಾಸಕಿ ಶ್ರೀಲತಾ ನಿರೂಪಿಸಿದರೆ, ರಂಜಿತಾ ವಂದಿಸಿದರು.



