ಉಡುಪಿ: ಉಡುಪಿ ನಗರಸಭೆಗೆ ಸಂಬಂಧಿಸಿದ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಬೆಂಕಿ ಅನಾಹುತ ಸಂಭವಿಸಿ, ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿರುವ ಘಟನೆ ಅಲೆವೂರು ಗ್ರಾಪಂ ವ್ಯಾಪ್ತಿಯ ಕರ್ವಾಲುವಿನಲ್ಲಿ ನಡೆದಿದೆ. ಶನಿವಾರ ಮುಂಜಾನೆ ೩ ಗಂಟೆ ಸುಮಾರಿಗೆ ಘನ ತ್ಯಾಜ್ಯದ ರಾಶಿಗೆ ಬೆಂಕಿ ಬಿದ್ದು, ಬೆಂಕಿಯ ಕೆನ್ನಾಲಿಗೆ ಇಡಿ ಘಟಕಕ್ಕೆ ವಿಸ್ತರಿಸಿತ್ತು. ಬೆಂಕಿಯ ತೀವ್ರತೆಗೆ ಕಟ್ಟಡದ ಒಳಗಿದ್ದ ಯಂತ್ರೋಪಕರಣಗಳು, ರಾಶಿ ಹಾಕಲಾದ ತ್ಯಾಜ್ಯ ಸಂಪೂರ್ಣ ಹೊತ್ತಿ ಉರಿದಿದೆ.

ಬೆಂಕಿ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದವರು ಎರಡು ವಾಹನಗಳನ್ನು ಬಳಸಿ ಬೆಂಕಿಯನ್ನು ಹತೋಟಿಗೆ ತರಲು ಕಾರ್ಯಚರಣೆ ನಡೆಸಿದರು. ಘಟನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ತ್ಯಾಜ್ಯ ವಿಂಗಡನೆ, ಪರಿಸ್ಕರಣೆ ಯಂತ್ರೋಪಕರಣಗಳು ಸುಟ್ಟು ಹೋಗಿವೆ. ಎನ್‌ಜಿಒ ವೊಂದಕ್ಕೆ ಸಂಬಂಧಿಸಿ ಯಂತ್ರೋಪಕರಣವಿದ್ದು, ಅದೂ ಸುಟ್ಟಿದೆ. 4ರಿಂದ 5 ಕೋಟಿ ರೂ. ನಷ್ಟಸಂಭವಿಸಿದೆ ಎಂದು ನಗರಸಭೆಯ ಪೌರಾಯುಕ್ತ ಮಹಾಂತೇಶ್ ಹಂಗರಗಿ ತಿಳಿಸಿದ್ದಾರೆ.
