ಉಡುಪಿ : ಕರಾವಳಿ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಸರಣಿ ಅಪಘಾತಗಳ ಹಿನ್ನೆಲೆಯಲ್ಲಿ, ಕೇರಳ ಗಡಿ ತಲಪಾಡಿಯಿಂದ ಬೈಂದೂರು ಮೂಲಕ ಕಾರವಾರದವರೆಗೆ ರೈಲ್ವೆ ಹಳಿಗಳ ಸನಿಹದಲ್ಲಿ ಹೊಸ ಎಕ್ಸ್ಪ್ರೆಸ್ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವಂತೆ ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಯಲ್ಲಿ ನಿಯಮ 377ರ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಈ ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣದಿಂದ ಕರಾವಳಿ ಕರ್ನಾಟಕದಲ್ಲಿ ಸಂಚಾರ ಸುಗಮವಾಗುವುದರ ಜೊತೆಗೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ. ಮಂಗಳೂರು–ಗೋವಾ ವರೆಗೆ ಕರಾವಳಿ ಅಭಿವೃದ್ಧಿಗೆ ಹೊಸ ದಿಕ್ಕು ಸಿಗಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಇದಲ್ಲದೆ, ಆಗುಂಬೆ (ಎನ್ಹೆಚ್–169ಎ) ಮೂಲಕ ಶೃಂಗೇರಿ, ಅಗಲಗುಂಡಿ, ಜೈಪುರ, ಬಾಳೆಹೊನ್ನೂರು, ಹೈರಂಬಿ, ಆಲ್ದೂರು, ನದಿಪುರ ಹಾಗೂ ಚಿಕ್ಕಮಗಳೂರು ಸಂಪರ್ಕಿಸುವ ಸುಮಾರು 120 ಕಿ.ಮೀ ಪಿಡಬ್ಲ್ಯೂಡಿ ರಸ್ತೆಯನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸುವಂತೆ ಅವರು ಮನವಿ ಮಾಡಿದ್ದಾರೆ.

ಇದರಿಂದ ಶೃಂಗೇರಿಯಂತಹ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಭಕ್ತರಿಗೆ ಹಾಗೂ ಕೃಷಿ ಪ್ರದೇಶಗಳಲ್ಲಿ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.ಅಲ್ಲದೆ, ಕುಂದಾಪುರ–ಕೋಟೇಶ್ವರ–ಹಾಲಾಡಿ–ಸೋಮೇಶ್ವರ–ಆಗುಂಬೆ–ಶೃಂಗೇರಿ ಸಂಪರ್ಕಿಸುವ 88 ಕಿ.ಮೀ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಿ ಅಭಿವೃದ್ಧಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸಂಸದ ಕೋಟ ಮನವಿ ಮಾಡಿದ್ದಾರೆ.



