ಉಡುಪಿ: ಉಡುಪಿಯ ಮಣಿಪಾಲದಲ್ಲಿ ವಿದ್ಯಾರ್ಥಿಗಳು ಮತ್ತು ಕೈಗಾರಿಕಾ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನ ಗುರಿಯಾಗಿಸಿ ಗಾಂಜಾ, ಮಾದಕ ವಸ್ತು ಮತ್ತು ಎಲ್ ಎಸ್ ಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಜಾಲವನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಮಣಿಪಾಲ ಪೊಲೀಸರು ಇತ್ತೀಚಿಗೆ ಹೊರ ರಾಜ್ಯಗಳ ವಿದ್ಯಾರ್ಥಿಗಳು ಮತ್ತು ಮಣಿಪಾಲದ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಡ್ರಗ್ಸ್ ಪರೀಕ್ಷೆ ನಡೆಸಿದಾಗ ಡ್ರಗ್ಸ್ ಸೇವನೆಯ ಪ್ರಕರಣಗಳು ಪತ್ತೆ ಆಗಿತ್ತು, ಡ್ರಗ್ಸ್ ಮೂಲವನ್ನು ಬೆನ್ನು ಬಿದ್ದಾಗ ಕೇರಳ ವ್ಯಕ್ತಿಗಳು ಡ್ರಗ್ಸ್ ಮಾರಾಟ ಮಾಡುತ್ತಿರುವ ಪ್ರಕರಣ ಪತ್ತೆ ಆಗಿದೆ.

ಕೇರಳದ ಕಾರ್ಮಿಕರಾದ ಅಜೀಸ್(28) ಮತ್ತು ವಿಪಿನ್ (32), ಬಿಪಿನ್(24), ಅಖಿಲ್ (26) ಹಾಗೂ ಇತರ ಇಬ್ಬರನ್ನು ಗಾಂಜಾ ಸೇವನೆಯ ಹಿನ್ನಲೆ ವಶಕ್ಕೆ ಪಡೆಯಲಾಗಿತ್ತು. ಪರೀಕ್ಷೆ ನಡೆಸಿದಾಗ ನಾಲ್ವರು ಆರೋಪಿಗಳು ಗಾಂಜಾ ಸೇವಿಸಿರುವುದು ದೃಢವಾಗಿದೆ. ವಿಚಾರಣೆ ನಡೆಸಿದಾಗ ಆರೋಪಿಗಳಿಗೆ ಮಿಥುನ ಎನ್ನುವಾತ ಗಾಂಜಾ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾರೆ. ಆರೋಪಿಗಳ ಮಾಹಿತಿ ಮೇರೆಗೆ ಹೆರ್ಗ ಗ್ರಾಮದ ಈಶ್ವರನಗರ ನರಸಿಂಹ ದೇವಸ್ಥಾನ ರಸ್ತೆಯ ಬಳಿ, ಮಣಿಪಾಲ ಆಟೋ ಬಾರ್ ಕಟ್ಟಡದ ಮೊದಲನೇ ಮಹಡಿಯ ರೂಮ್ ನಂಬರ್ 03 ಕ್ಕೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ, ಗಾಂಜಾ ಮಾರಾಟ ಮಾಡುತ್ತಿದ್ದಾಗಲೇ ಆರೋಪಿಗಳಾದ ಅಫ್ಶಿನ್ (26) ಮತ್ತು ಶಿವನಿಧಿ ಆಚಾರ್ಯ (20) ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳು ಬೆಂಗಳೂರಿನಿಂದ ಗಾಂಜಾ ಮತ್ತು ಎಲ್ ಎಸ್ ಡಿ ಡ್ರಗ್ಸ್ ತರಿಸಿ ಮಣಿಪಾಲದಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿತರುಗಳಿಂದ 1 kg 237 ಗ್ರಾಂ ಗಾಂಜಾ, 0.038 ಗ್ರಾಂ LSD ಸ್ಟ್ರಿಪ್, ಡಿಜಿಟಲ್ ಸ್ಕೇಲ್-1 ಮತ್ತು ನಗದು ಸಹಿತ ಇನ್ನಿತರ ವಸ್ತುಗಳನ್ನು ಮಣಿಪಾಲ ಪೊಲೀಸ್ ರು ವಶಕ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿದ್ದಾರೆ. ಬಳಿಕ ತನಿಖೆ ಮುಂದುವರೆಸಿದ ಮಣಿಪಾಲ್ ಪೊಲೀಸ್ ರು ಮನೀಶ್ (34) ಎನ್ನುವಾತನನ್ನು ಮಣಿಪಾಲ ವಿದ್ಯಾರತ್ನ ನಗರದ ಮಾಂಡವಿ ಸಫಯಾರ್ ಅಪಾರ್ಟಮೆಂಟ್ ನ ಫ್ಲಾಟ್ ಗೆ ಧಾಳಿ ಮಾಡಿ ಆರೋಪಿಯ ಮನೆಯಲ್ಲಿ ಇದ್ದ 653 ಗ್ರಾಂ ಗಾಂಜಾ, 2 ಡಿಜಿಟಲ್ ಸ್ಕೇಲ್, 1 ಗಾಂಜಾ ಕ್ರಷರ್, 3000 ರೂಪಾಯಿ ನಗದು ಹಾಗೂ 1 ಮೊಬೈಲ್ ಪೋನನ್ನು ಸ್ವಾಧೀನಪಡಿಸಿಕೊಂಡು 3 ಜನ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು , ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿತರ ಪೈಕಿ ಅಫ್ಶಿನ್ ವಿರುದ್ಧ 2023ರಲ್ಲಿ ಮಣಿಪಾಲದಲ್ಲಿ ಎಂಡಿಎಂಎ ಮಾರಾಟ ಪ್ರಕರಣ ದಾಖಲಾಗಿದ್ದು, ಮನೀಶ್ ವಿರುದ್ಧ ಕೇರಳದ ಬೇಕಲದಲ್ಲಿ ಗಾಂಜಾ ಸೇವನೆ ಪ್ರಕರಣ ದಾಖಲಾಗಿತ್ತು. ಇನ್ನು ಅಫ್ಶಿನ್ ಖಾಸಗಿ ಆಯುರ್ವೇದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಮತ್ತು ಕಾರ್ಮಿಕರನ್ನು ಗುರಿಮಾಡಿ ಡ್ರಗ್ಸ್ ಮಾರಾಟ ಮಾಡುತ್ತ, ಆರೋಪಿ ಶಿವನಿಧಿ ಮಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಯಾಗಿದ್ದು, ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯರಿಗೆ ಡ್ರಗ್ಸ್ ಮಾರಾಟ ಮಾಡುತ್ತ, ಮನೀಶ ಎಂಬಾತ ವೆಲ್ಡಿಂಗ್ ವೃತ್ತಿ ಮಾಡಿಕೊಂಡು ಕೇರಳ ಹಾಗೂ ಹೊರರಾಜ್ಯಗಳಿಂದ ಬರುವ ಮಣಿಪಾಲದ ಸುತ್ತ ಮುತ್ತ ಇರುವ ಕಾರ್ಮಿಕರಿಗೆ ಗಾಂಜಾ ಸರಬರಾಜು ಮಾಡುತ್ತಿರುವುದು ಬೆಳಕಿಗೆ ಬಂದಿದೆ.