ಬೈಂದೂರು: ಜೊತೆಗೆ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರಿಬ್ಬರು ಕುಡಿದ ಮತ್ತಿನಲ್ಲಿ ಜಗಳವಾಡಿಕೊಂಡಿ ಹಲ್ಲೆ ಮಾಡಿ, ಓರ್ವನನ್ನು ಇರಿದು ಕೊಂದ ಘಟನೆ ಬೈಂದೂರು ಬಳಿ ನಡೆದಿದೆ. ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರಗದ್ದೆ ಎಂಬಲ್ಲಿ ಘಟನೆ ನಡೆದಿದ್ದು, ಬಿನು (45) ಕೊಲೆಯಾದ ಕಾರ್ಮಿಕ.

ಕೊಸಳ್ಳಿ ಸಮೀಪದ ದೇವರಗದ್ದೆ ಥೋಮಸ್ ಕುಟ್ಟಿ ಎನ್ನುವವರ ತೋಟದಲ್ಲಿ ಕೇರಳ ಮೂಲದ ಬಿನು ಹಾಗೂ ಉದಯ್ ಎನ್ನುವವರು ಎರಡು ವರ್ಷದಿಂದ ರಬ್ವರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದರು. ವಿಪರೀತ ಕುಡಿತದ ಚಟವಿರುವ ಇಬ್ಬರು ಕೂಡ ಯಾವಾಗಲೂ ಕುಡಿದು ಜಗಳವಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಶನಿವಾರ ರಾತ್ರಿ ೧ ಗಂಟೆ ಸುಮಾರು ಇಬ್ಬರ ನಡುವೆ ಜಗಳ ಕೈ ಮೀರಿ ಹೋಗಿ ಉದಯ ಎನ್ನುವಾತ ರಬ್ಬರ್ ಟ್ಯಾಪಿಂಗ್ ಮಾಡುವ ಚೂರಿಯಿಂದ ಬಿನು ಎನ್ನುವವನನ್ನು ಚುಚ್ಚಿದ್ದಾನೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಬಿನು ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಕೊಲೆ ಆರೋಪಿ ಉದಯ ಗೂ ಹಲ್ಲೆಯಾಗಿರುವ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನಾಸ್ಥಳಕ್ಕೆ ಕುಂದಾಪುರ ಡಿ ವೈ ಎಸ್ ಪಿ. ಎಚ್.ಡಿ ಕುಲಕರ್ಣಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.


