ಉಡುಪಿ: ಗ್ಯಾಸ್ ಅಭಾವವನ್ನು ಬಂಡವಾಳ ಮಾಡಿಕೊಂಡು ಸೈಬರ್ ವಂಚಕರು ಗ್ಯಾಸ್ ಬುಕ್ಕಿಂಗ್ ಅಥವಾ ಗ್ಯಾಸ್ ಸಿಲಿಂಡರ್ ಕೆವೈಸಿ ಅಪ್ಡೇಟ್ ಹೆಸರಿನಲ್ಲಿ ಮೋಸ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಈ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಅಪರಿಚಿತರಿಂದ ಬರುವ ಲಿಂಕ್ಗಳು ಅಥವಾ ಎಪಿಕೆ ಫೈಲ್ಗಳನ್ನು ತೆರೆಯದೇ ಜಾಗರೂಕರಾಗಿರಬೇಕು ಎಂದು ತಿಳಿಸಿದ್ದಾರೆ. ಈ ರೀತಿಯ ವಂಚನೆಗೆ ಈಗಾಗಲೇ ಉಡುಪಿ ಜಿಲ್ಲೆಯ ಇಬ್ಬರು ವ್ಯಕ್ತಿಗಳು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವುದಾಗಿ ತಿಳಿದುಬಂದಿದೆ.

ಸಾರ್ವಜನಿಕರು ಯಾವುದೇ ಅನುಮಾನಾಸ್ಪದ ಸಂದೇಶಗಳು, ಕರೆಗಳು ಅಥವಾ ಲಿಂಕ್ಗಳ ಬಗ್ಗೆ ಎಚ್ಚರಿಕೆ ವಹಿಸಿ, ಅಧಿಕೃತ ಮೂಲಗಳ ಮೂಲಕವೇ ಗ್ಯಾಸ್ ಬುಕ್ಕಿಂಗ್ ಹಾಗೂ ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಎಸ್ಪಿ ಮನವಿ ಮಾಡಿದ್ದಾರೆ.



