ಉಡುಪಿ : ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗೃಹರಕ್ಷಕರು ಸಮಾಜಕ್ಕೆ ಅತ್ಯುತ್ತಮ ಸೇವೆ ನೀಡುತ್ತಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿಯೂ ಗೃಹರಕ್ಷಕರು ಪೊಲೀಸರಷ್ಟೇ ಸಮರ್ಥರಾಗಿ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಜೊತೆಗೆ ವೈಯಕ್ತಿಕವಾಗಿಯೂ ಸಾಧನೆ ಮಾಡುತ್ತಿದ್ದಾರೆ. ಇವರ ಸಾಧನೆ ಇತರರಿಗೂ ಮಾದರಿಯಾಗಲಿ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್. ನಾಯ್ಕ್ ಹೇಳಿದರು.

ಅವರು ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ನಡೆದ ಅಖಿಲ ಭಾರತ ಗೃಹರಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗೃಹರಕ್ಷಕರು ಪೊಲೀಸ್, ಎನ್.ಸಿ.ಸಿ, ಪ್ರವಾಸೋದ್ಯಮ, ಸಾರಿಗೆ, ಪುರಾತತ್ವ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ತಮ್ಮ ಸೇವೆ ನೀಡುವ ಜೊತೆಗೆ ಪ್ರಾಕೃತಿಕ ವಿಕೋಪ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸುರಕ್ಷತಾ ವ್ಯವಸ್ಥೆಯನ್ನೂ ನಿರ್ವಹಿಸುತ್ತಿರುತ್ತಾರೆ. ತಮ್ಮ ಕಾರ್ಯಕ್ಷೇತ್ರಗಳಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ ಜೊತೆ ವಿವಿಧ ಕೇತ್ರಗಳಲ್ಲಿ ಸಾಧನೆ ಮಾಡಿ ಜಿಲ್ಲೆಗೂ ಕೀರ್ತಿ ತರುತ್ತಿದ್ದು, ಇವರಿಂದ ಇತರರೂ ಪ್ರೇರಣೆ ಪಡೆದು ಸಾಧನೆ ಮಾಡಬೇಕು ಎಂದರು.

ಆದರ್ಶ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಜಿ.ಎಸ್.ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗೃಹರಕ್ಷರಾದ ಶಶಿಕಿರಣ್, ಅನಿಲ್ ಥೋಮಸ್, ಜಯಂತಿ, ಸಂಧ್ಯಾ, ಲತಾ ಮತ್ತು ದಿನೇಶ್ ಇವರನ್ನು ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರತಿಜ್ಞಾ ವಿಧಿ ಬೋಧಿಸಿ ವಾರ್ಷಿಕ ವರದಿ ವಾಚಿಸಿದರು. ಜಿಲ್ಲಾ ಗೃಹರಕ್ಷಕ ದಳದ ಅಧೀಕ್ಷಕ ರತ್ನಾಕರ್ ಸನ್ಮಾನಿತರ ವಿವರ ವಾಚಿಸಿದರು. ಬ್ರಹ್ಮಾವರ ಘಟಕ ಪ್ಲಟೂನ್ ಕಮಾಂಡರ್ ಸ್ಟೀವನ್ ಪ್ರಕಾಶ್ ಲೂವಿಸ್ ನಿರೂಪಿಸಿ, ಪ್ರಭಾಕರ್ ಸುವರ್ಣ ವಂದಿಸಿದರು.



