Tuesday, March 31, 2026

spot_img

ಗೃಹಬಳಕೆ ಅನಿಲ ವಿತರಣೆಯಲ್ಲಿ ತೊಂದರೆ ತಪ್ಪಿಸಲು ಕಟ್ಟುನಿಟ್ಟಿನ ಸೂಚನೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ : ಜಿಲ್ಲೆಯ ಗೃಹಬಳಕೆ ಗ್ರಾಹಕರಿಗೆ ಅನಿಲ ಸಿಲಿಂಡರ್ ವಿತರಣೆಯಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳು ಹಾಗೂ ವಿತರಣಾ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

 ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೃಹಬಳಕೆ ಸೇರಿದಂತೆ ಇತರೆ ಅನಿಲ ವಿತರಣೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಏಕ ಸಿಲಿಂಡರ್ ಹೊಂದಿರುವ ಗ್ರಾಹಕರಿಗೆ ವಿತರಣೆಯಲ್ಲಿ ಸಮಸ್ಯೆಗಳು ಎದುರಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ ಎಂದು ತಿಳಿಸಿದರು.

ಹಿಂದೆ ಬೇಡಿಕೆಗೆ ಅನುಗುಣವಾಗಿ ಅನಿಲ ಲಭ್ಯವಾಗುತ್ತಿದ್ದರೂ, ಪಶ್ಚಿಮ ಏಷ್ಯಾ ದೇಶಗಳಲ್ಲಿ ಉಂಟಾದ ಯುದ್ಧ ಪರಿಸ್ಥಿತಿಯಿಂದ ಅನಿಲ ಆಮದು ಪ್ರಮಾಣದಲ್ಲಿ ವ್ಯತ್ಯಯ ಉಂಟಾಗಿ ಕೆಲವು ತೊಂದರೆಗಳು ಕಂಡುಬಂದಿವೆ. ಆದಾಗ್ಯೂ, ಗೃಹಬಳಕೆ ಅನಿಲ ವಿತರಣೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ವಿಶೇಷವಾಗಿ ಏಕ ಸಿಲಿಂಡರ್ ಹೊಂದಿರುವ ಗ್ರಾಹಕರಿಗೆ ತೊಂದರೆಯಾಗದಂತೆ ವಿತರಣಾ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಿತರಣೆಯಲ್ಲಿ ಯಾವುದೇ ತೊಂದರೆ ಇಲ್ಲದಿದ್ದರೂ, ಅನಧಿಕೃತ ದಾಸ್ತಾನು ಮಾಡದಂತೆ ಎಚ್ಚರ ವಹಿಸಬೇಕು. ಜನರೇಟರ್ ಹಾಗೂ ಮೀನುಗಾರಿಕಾ ದೋಣಿಗಳಿಗೆ ನಿರಂತರವಾಗಿ ಇಂಧನ ಬಳಸುವವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ವಾಹನ ಬಳಕೆಯ ಅನಿಲವನ್ನು ನಿಗದಿತ ದರದಲ್ಲೇ ಮಾರಾಟ ಮಾಡಬೇಕು. ಹೆಚ್ಚು ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವಿತರಣಾ ಕೇಂದ್ರಗಳಲ್ಲಿ ದರಪಟ್ಟಿ ಹಾಗೂ ದಾಸ್ತಾನು ವಿವರಗಳನ್ನು ಸಾರ್ವಜನಿಕರಿಗೆ ಗೋಚರವಾಗುವಂತೆ ಪ್ರದರ್ಶಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಸಹಾಯಕ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ ಸೇರಿದಂತೆ ಅನಿಲ ಏಜನ್ಸಿಗಳ ಮಾಲೀಕರು ಮತ್ತು ವಿತರಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles