ಉಡುಪಿ: ಗಂಗೊಳ್ಳಿಯಿಂದ ಕುಂದಾಪುರ ನಗರವನ್ನು ಸಂಪರ್ಕಿಸುವ ಸುಮಾರು 1.3 ಕಿಮೀ ಉದ್ದದ ಪ್ರಸ್ತಾವಿತ ಸೇತುವೆಗೆ ಸಂಬಂಧಿಸಿದ ವಿವರ ಯೋಜನೆ (ಡಿಪಿಆರ್) ತಯಾರಿಕೆ ಅಂತಿಮ ಹಂತದಲ್ಲಿದ್ದು, ಜನವರಿ 30ರೊಳಗೆ ಡಿಪಿಆರ್ ಸಲ್ಲಿಸುವಂತೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಸೂಚಿಸಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ಅವರು ಪಂಚಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಾಣಗೊಳ್ಳುವ ಸೇತುವೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೇತುವೆಗಳು ನಿರ್ಮಾಣಗೊಂಡಂತೆ, ಗಂಗೊಳ್ಳಿಗೂ ಸಂಪರ್ಕ ಸೇತುವೆ ನಿರ್ಮಾಣಗೊಳ್ಳಬೇಕು ಎಂಬುದು ನನ್ನ ದೀರ್ಘಕಾಲದ ಕನಸು. ಅದನ್ನು ನನಸಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೂರು ಪ್ರತ್ಯೇಕ ಡಿಪಿಆರ್‌ಗಳನ್ನು ತಯಾರಿಸಿದ್ದು, ಅಂತಿಮ ಮಾದರಿ ಆಯ್ಕೆ ಪ್ರಕ್ರಿಯೆ ಮುಂದುವರಿದಿದೆ ಎಂದು ಅವರು ತಿಳಿಸಿದರು. ಜನರಿಗೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದರೊಂದಿಗೆ, ಕೊಲ್ಲೂರು ಕಾರಿಡಾರ್ ಯೋಜನೆ ಕುರಿತು ಹಿಂದೆಯೇ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಶೇಖಾವತ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮರವಂತೆ ಬೀಚ್, ಸೋಮೇಶ್ವರ ಬೀಚ್, ಕೊಲ್ಲೂರು ದೇವಸ್ಥಾನಗಳನ್ನು ಒಳಗೊಂಡ 100 ಕೋಟಿ ರೂಪಾಯಿ ಮೌಲ್ಯದ ಪ್ರವಾಸೋದ್ಯಮ ಯೋಜನೆಯೂ ಬಾಕಿಯಿದ್ದು, ಕೆಲವು ಅಡೆತಡೆಗಳನ್ನು ನಿವಾರಿಸಲಾಗಿದೆ. ಮುಂಬರುವ ಬಜೆಟ್‌ನಲ್ಲಿ ಈ ಯೋಜನೆ ಮಂಜೂರಾಗುವ ವಿಶ್ವಾಸವಿದೆ ಎಂದು ಸಂಸದರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಪಕ್ಷದ ಮುಖಂಡರು, ಮೀನುಗಾರ ಪ್ರತಿನಿಧಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.


