ಉಡುಪಿ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕ್ರೇನ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉದ್ಯಾವರ ಗ್ರಾಮದ ಹೋಟೆಲ್ ಲಲಿತ್ ಎದುರು ಗುರುವಾರ ಸಂಜೆ ಸಂಭವಿಸಿದೆ.

ಮೃತರನ್ನು ಕಾರವಾರ ಮೂಲದ ಸುನೀಲ್ ರಾಮಚಂದ್ರ ರಾಯ್ಕರ್ ಅವರ ಪತ್ನಿ ದಿವ್ಯ ಎಸ್. ರಾಯ್ಕರ್ (45) ಎಂದು ಗುರುತಿಸಲಾಗಿದೆ.

ಮಾಹಿತಿಯಂತೆ, ದಿವ್ಯ ಅವರು ತಮ್ಮ ಪತಿ, ಮಗಳು ಹಾಗೂ ಚಾಲಕರೊಂದಿಗೆ ಮಂಗಳೂರಿನ ಆಸ್ಪತ್ರೆಯಿಂದ ಕಾರಿನಲ್ಲಿ ಹಿಂದಿರುಗುತ್ತಿದ್ದರು. ಈ ವೇಳೆ ಉದ್ಯಾವರದಲ್ಲಿ ಹೋಟೆಲ್ ಎದುರು ಕಾರು ನಿಲ್ಲಿಸಿ, ರಸ್ತೆ ಪಕ್ಕದಲ್ಲಿ ಬ್ಯಾಟ್ ಮಾರಾಟ ಮಾಡುತ್ತಿದ್ದವರಿಂದ ಖರೀದಿ ಮಾಡಲು ದಿವ್ಯ ಅವರು ರಸ್ತೆ ದಾಟಲು ನಿಂತಿದ್ದರು.ಈ ವೇಳೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕ್ರೇನ್ ವಾಹನವು ದಿವ್ಯ ಅವರಿಗೆ ಢಿಕ್ಕಿ ಹೊಡೆದಿದ್ದು, ಅವರು ವಾಹನದ ಮುಂಭಾಗದ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಕ್ಷಣವೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಗಂಭೀರ ಸ್ಥಿತಿಯಲ್ಲಿದ್ದ ದಿವ್ಯ ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



