ಉಡುಪಿ: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದರ ಸವಿ ನೆನಪಿಗಾಗಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಸಾರ್ವಜನಿಕರಿಗೆ 10 ಸಾವಿರ ಚಕ್ಕುಲಿಗಳನ್ನು ಉಚಿತವಾಗಿ ವಿತರಿಸಲಾಯಿತು.

ನಾಗರಿಕ ಸಮಿತಿಯ ಕಚೇರಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಚಕ್ಕುಲಿ ವಿತರಣೆಗೆ ಚಾಲನೆ ನೀಡಲಾಯಿತು. ಲಕ್ಷ್ಮೀವರ ತೀರ್ಥ ಶ್ರೀಪಾದರ ಸಹೋದರ ಲಾತವ್ಯ ಆಚಾರ್ಯ ಮಾತನಾಡಿ, ಸಮಿತಿ ಹಲವು ವರ್ಷಗಳಿಂದ ಚಕ್ಕುಲಿ ವಿತರಿಸುವ ಮೂಲಕ ಕೃಷ್ಣಾಷ್ಟಮಿ ಸಂಭ್ರಮವನ್ನು ಸ್ಮರಣೀಯವಾಗಿಸುತ್ತಿದೆ ಎಂದರು.

ಸಹಕಾರಿ ಧುರೀಣ, ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಅವರ ಸಮಾಜಸೇವಾ ಕಾರ್ಯಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲಿವೆ. ಅವರ ಪ್ರತಿಯೊಂದು ಸೇವಾ ಕಾರ್ಯವೂ ವಿಭಿನ್ನವಾಗಿದ್ದು, ಈ ಸೇವಾ ಪರಂಪರೆ ಮುಂದುವರಿಯಲಿ ಎಂದು ಹಾರೈಸಿದರು.

ನಾಗರಿಕ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ ಮಾತನಾಡಿದರು. ಸಂಚಾಲಕ ನಿತ್ಯಾನಂದ ಒಳಕಾಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಮಿ ಭಾಸ್ಕರ್ ಶೇರಿಗಾರ್, ಗೀತಾ ನಾಗೇಶ್ ಹೆಗ್ಡೆ, ರಾಘವೇಂದ್ರ ಪ್ರಭು ಕರ್ವಾಲು, ವಿಕಾಶ್ ಶೆಟ್ಟಿ, ಗಂಗಾಧರ್, ವಾಸುದೇವ, ಶಂಕರ್ ನಾಯಕ್, ಸುಮಾ ಆಚಾರ್, ದೇವಕಿ ಬಾರ್ಕೂರು ಮತ್ತಿತರರು ಉಪಸ್ಥಿತರಿದ್ದರು.

ಸ್ಥಳದಲ್ಲೇ ತಯಾರಿ: ಶಂಕರ್ ನಾಯಕ್ ಅವರ ತಂಡ ಸ್ಥಳದಲ್ಲೇ ಚಕ್ಕುಲಿ ತಯಾರಿಸಿ ಸಾರ್ವಜನಿಕರಿಗೆ ವಿತರಿಸಿದ್ದು ವಿಶೇಷ ಗಮನ ಸೆಳೆಯಿತು. ಬಳಿಕ ಸುಮಾರು 10 ಸಾವಿರ ಚಕ್ಕುಲಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂಚಲಾಯಿತು.


