ಉಡುಪಿ: ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನಕ್ಕೆ ಕಳ್ಳತನ ಮಾಡಲು ಬಂದು ತಪ್ಪಿಸಿಕೊಳ್ಳುವಾಗ ಓರ್ವ ಕಳ್ಳನಿಗೆ ಮೂರ್ಛೆ ರೋಗ ಉಲ್ಬಣಿಸಿ ಆತನ ಜೊತೆ ಮತ್ತೋರ್ವ ಕಳ್ಳನು ಸೆರೆ ಸಿಕ್ಕ ಘಟನೆ ನಡೆದಿದೆ. ಕೇರಳ ಮೂಲದ ಕಿರಣ್ ಜೆ.ಜೆ (33) ಮತ್ತು ವಿಷ್ಣು ಬಂಧಿತರು.
ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನಕ್ಕೆ ತಡರಾತ್ರಿ 1 ಗಂಟೆಗೆ ಸುಮಾರಿಗೆ ದೇವಸ್ಥಾನ ದ್ವಾರ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸುತ್ತಿರುವಾಗ,ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್ ಆತನನ್ನು ಹಿಡಿಯಲು ಹೋದಾಗ ಇಬ್ಬರೂ ಆರೋಪಿಗಳು ಚಾಕು ತೋರಿಸಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಬೊಬ್ಬೆಗೆ ಸ್ಥಳೀಯರು ಎಚ್ಚರಗೊಂಡು ಸಿಸಿ ಟಿವಿ ಪರಿಶೀಲಿಸಿದಾ ಕೃತ್ಯ ಕಂಡು ಬಂದಿದ್ದು, ಕಳ್ಳರು ಓಡಿದ ದಿಕ್ಕಿನಲ್ಲಿ ಹುಡುಕಾಟ ನಡೆಸಿದಾಗ ಕಡಿಯಾಳಿ ಪೆಟ್ರೋಲ್ ಬಂಕ್ ಬಳಿ ಇಬ್ಬರು ಸಿಕ್ಕಿ ಬಿದ್ದಿದ್ದಾರೆ.
ದೇವಸ್ಥಾನದಿಂದ ಪರಾರಿಯಾಗಲು ಓಡುತ್ತಿರುವಾಗ ಓರ್ವ ಕಳ್ಳನಿಗೆ ಮೂರ್ಛೆ ರೋಗ ಕಾಣಿಸಿಕೊಂಡಿದೆ. ಹೀಗಾಗಿ ಜೊತೆಗೆ ಇದ್ದ ಕಳ್ಳ ಮೂರ್ಛೆಹೋಗಿರುವ ಕಳ್ಳನ ಉಪಚರಿಸುತ್ತಿದ್ದಾಗ ಸ್ಥಳಿಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಳಿಕ ಗಂಭೀರ ಸ್ಥಿತಿಯಲ್ಲಿದ್ದ ಕಳ್ಳನಿಗೆ, ಸ್ಥಳೀಯರು ಕಳ್ಳತನಕ್ಕೆ ತಂದಿರುವ ಕಬ್ಬಿಣದ ಸಲಕರಣೆಗಳನ್ನು ಕೈಗೆ ನೀಡಿ ಕಳ್ಳನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಕಳ್ಳರನ್ನು ಉಡುಪಿ ಪೊಲೀಸ್ ರಿಗೆ ಹಸ್ತಾಂತರಿಸಲಾಗಿದ್ದು, ಮೂರ್ಛೆ ರೋಗಕ್ಕೆ ತುತ್ತಾದ ಕಳ್ಳನಿಗೆ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.