ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಮಹಿಳಾ ಘಟಕದಲ್ಲಿ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆ ಕಾರ್ಯಕರ್ತೆಯರು ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿರುವುದಾಗಿ ಕಾರ್ಯಕರ್ತೆ ಮೀರಾ ತಿಳಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಸಂಘಟನೆಯ ಸಕ್ರಿಯ ಸದಸ್ಯರಾಗಿ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಗಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ಮಹಿಳಾ ಘಟಕದ ಹಿಂದಿನ ಜಿಲ್ಲಾಧ್ಯಕ್ಷೆ ಜ್ಯೋತಿ ಶೇರಿಗಾರ್ತಿ ಅವರ ನಾಯಕತ್ವದಲ್ಲಿ ಮುಂದುವರಿಯಲು ಇಷ್ಟವಿಲ್ಲದ ಹಿನ್ನೆಲೆಯಲ್ಲಿ ಸಂಘಟನೆಯ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಜ್ಯೋತಿ ಶೇರಿಗಾರ್ತಿ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಮಹಿಳಾ ಸದಸ್ಯರ ಕುರಿತು ಅನಗತ್ಯ ವಿಚಾರಗಳನ್ನು ಪ್ರಚಾರ ಮಾಡಿ ಸಂಘಟನೆಯಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ಸಂಘಟನೆಯ ಪ್ರಮುಖರು ಉಡುಪಿ ಜಿಲ್ಲೆಗೆ ಭೇಟಿ ನೀಡಿದ ವೇಳೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದೇವೆ ಎಂದು ತಿಳಿಸಿದರು.

ಇದರ ಬಳಿಕ ಮೇ 10ರಂದು ಚುನಾವಣೆಯನ್ನು ನಡೆಸುವುದಾಗಿ ತಿಳಿಸಿ ಮಹಿಳಾ ಹಾಗೂ ಪುರುಷ ಘಟಕಗಳನ್ನು ಬರ್ಕಾಸ್ತುಗೊಳಿಸಲಾಗಿದೆ. ಆದಾಗ್ಯೂ ಘಟಕ ಬರ್ಕಾಸ್ತುಗೊಂಡಿದ್ದರೂ ಜ್ಯೋತಿ ಶೇರಿಗಾರ್ತಿ ತಮ್ಮನ್ನು ಜಿಲ್ಲಾಧ್ಯಕ್ಷೆಯೆಂದು ಹೇಳಿಕೊಂಡು ಸಂಘಟನೆಯನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಪವಿತ್ರಾ ಶೆಟ್ಟಿ, ವಿಜಯ ಶ್ರೀನಿವಾಸ್, ಮಾಧವಿ ಶೆಟ್ಟಿ, ಮಮತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.



