ಉಡುಪಿ : ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಸಹಯೋಗದಲ್ಲಿ, ಉಡುಪಿ ಜಿಲ್ಲಾ ಲೇಖಕಿಯರ–ವಾಚಕಿಯರ ಸಂಘದ ಆಶ್ರಯದಲ್ಲಿ ಮಾರ್ಚ್ 14ರಂದು ರೆಡ್ಕ್ರಾಸ್ ಭವನದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹಿಳಾ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ಐದು ಮಂದಿ ಸಾಧಕಿಯರನ್ನು ಜಿಲ್ಲಾ ರೆಡ್ಕ್ರಾಸ್ ಘಟಕ ಗೌರವಿಸಲಿದೆ.

ಸಾರ್ವಜನಿಕ ಆಡಳಿತ ಸೇವೆಗಾಗಿ ಶ್ಯಾಮಲಾ ಸಿ.ಕೆ., ಹಿರಿಯ ಲೇಖಕಿ ಹಾಗೂ ಭಾಷಾಂತರ ತಜ್ಞೆ ಡಾ. ಪಾರ್ವತಿ ಜಿ. ಐತಾಳ್, ಕಲೆ ಮತ್ತು ಸಮಾಜಸೇವೆಗೆ ಕುಸುಮ ಕಾಮತ್ ಕರ್ವಾಲು, ಶೈಕ್ಷಣಿಕ ಸೇವೆಗೆ ಪ್ರೊ. ಸುಜಯ ಕೆ.ಎಸ್. ಹಾಗೂ ಹಿಂದಿ, ಸಾಹಿತ್ಯ, ಎನ್.ಎಸ್.ಎಸ್., ಎನ್.ಸಿ.ಸಿ ಮತ್ತು ರೆಡ್ಕ್ರಾಸ್ ಸೇವೆಗೆ ಕ್ಯಾಪ್ಟನ್ ಡಾ. ಸುಕನ್ಯ ಮಾರ್ಟಿಸ್ ಅವರನ್ನು ಗೌರವಿಸಲಾಗುತ್ತದೆ.

ಈ ಸಮಾರಂಭದಲ್ಲಿ ಚಲನಚಿತ್ರ ಮತ್ತು ರಂಗಭೂಮಿ ನಟಿ ಗೀತಾ ಸುರತ್ಕಲ್ ಅವರು ಸಾಧಕಿಯರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ ಎಂದು ರೆಡ್ಕ್ರಾಸ್ ಪ್ರಕಟಣೆ ತಿಳಿಸಿದೆ.



