ಉಡುಪಿ: ಬಡ ನಿಡಿಯೂರು ಗ್ರಾಮದ ಕಡಲ ತೀರದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಅಗತ್ಯವಾದ ಏಕ ವಿನ್ಯಾಸ ಅನುಮತಿ ಪತ್ರ ನೀಡದೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಇಂದಿನಿಂದ ಧರಣಿ ಆರಂಭಿಸಿದ್ದಾರೆ.

ಬೆಳಗ್ಗೆ ಸುಮಾರು 10 ಗಂಟೆಗೆ ಶಾಂತಿಯುತವಾಗಿ ಧರಣಿ ಆರಂಭಿಸಿದ ರಘುಪತಿ ಭಟ್, ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ. ನ್ಯಾಯ ಸಿಗುವವರೆಗೆ ಧರಣಿ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಸ್ಥಳಕ್ಕೆ ಭೇಟಿ ನೀಡಿದ ನಗರಾಭಿವೃದ್ಧಿ ಆಯುಕ್ತ ಮಹೇಶ್, ಎರಡು ದಿನಗಳೊಳಗೆ ಕಾನೂನು ಸಲಹೆ ಪಡೆದು ಸಮಸ್ಯೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರಘುಪತಿ ಭಟ್, ರೆಸಾರ್ಟ್ ನಿರ್ಮಾಣಕ್ಕೆ ಕಾನೂನಿನಲ್ಲಿ ಯಾವುದೇ ತೊಡಕಿಲ್ಲದಿದ್ದರೂ ಅನೇಕ ಕಾರಣಗಳನ್ನು ನೀಡಿ ಏಕ ವಿನ್ಯಾಸ ಅನುಮತಿ ಪತ್ರವನ್ನು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿದರು. ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದರೂ ಹೈಕೋರ್ಟ್ ಆದೇಶಕ್ಕೂ ಬೆಲೆ ನೀಡಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಅನುಮತಿ ಪತ್ರ ನೀಡಲು ಸಾಧ್ಯವಿಲ್ಲವೆಂದರೆ ಅದರ ಕುರಿತು ಲಿಖಿತ ಹಿಂಬರಹ ನೀಡಬೇಕು ಎಂದು ಆಗ್ರಹಿಸಿದ ಅವರು, ನ್ಯಾಯ ದೊರಕುವವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.



