ಉಡುಪಿ : ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೋಮವಾರ ತುಳಸೀ ಪೂಜೆ, ಲಕ್ಷದೀಪೋತ್ಸವ ಹಾಗೂ ರಥೋತ್ಸವ ಧಾರ್ಮಿಕ ಭಕ್ತಿ ಸಂಭ್ರಮದೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಮಧ್ಯಾಹ್ನ ರಥಬೀದಿಯಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಹಣತೆಯನ್ನಿಡುವ ಕಾರ್ಯಕ್ಕೆ ಪರ್ಯಾಯ ಪಾರ್ಯಾಯ ಪಲಿಮಾರು ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಮಠದಲ್ಲಿ ಕಳೆದ ಒಂದು ತಿಂಗಳ ಕಾಲ ನಡೆದ ಪಶ್ಚಿಮ ಜಾಗರ ಪೂಜೆ ವಿಧಿವತ್ತಾಗಿ ಸಂಪನ್ನಗೊಂಡಿತು.

ನಂತರ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಮಠದ ಪ್ರಾಂಗಣದಲ್ಲಿರುವ ತುಳಸಿ ಕಟ್ಟೆಯಲ್ಲಿ ತುಳಸೀ ಪೂಜೆ ನೆರವೇರಿಸಿದರು.

ಸಂಜೆ ವೇಳೆಯಲ್ಲಿ ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಕ್ಷೀರಾಬ್ಧಿ ಪೂಜೆ ನಡೆಯಿತು. ಪರ್ಯಾಯ ಉಭಯ ಶ್ರೀಗಳು ಕ್ಷೀರಾಭಿಷೇಕ ಹಾಗೂ ಪೂಜಾ ವಿಧಿಗಳನ್ನು ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.



