ಉಡುಪಿ : ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್, (ಸಿಐಟಿಯು)ನೇತ್ರತ್ವದಲ್ಲಿ ಇಂದು ಕಾರ್ಮಿಕ ಮಂತ್ರಿ ಸಂತೋಷ ಲಾಡ್ ಅವರನ್ನು ಭೇಟಿಯಾಗಿ ಬೀಡಿ ಕಾರ್ಮಿಕರ ಕನಿಷ್ಠ ಕೂಲಿ, ತುಟ್ಟಭತ್ಯೆ ಹಾಗೂ ಇನ್ನಿತರ ಸಮಸ್ಯೆ ಕುರಿತು ಮನವಿ ನೀಡಿ ಚರ್ಚೆ ನಡೆಸಲಾಯಿತು.

ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಮನವಿ ನೀಡಿ, ಬೀಡಿ ಮಾಲೀಕರು ಬೀಡಿ ಕಾರ್ಮಿಕರನ್ನು ಮೋಸ ಮಾಡುತ್ತಲೇ ಇದ್ದಾರೆ. ನಮ್ಮ ಕಾನೂನುಬದ್ಧ ಸವಲತ್ತುಗಳನ್ನು ನಾಶ ಮಾಡ ಹೊರಟಿದೆ. ಬೀಡಿ ಕಾರ್ಮಿಕರು ನಮ್ಮ ಸವಲತ್ತುಗಳನ್ನು ಉಳಿಸಲು ತೀವ್ರ ತರದ ಹೋರಾಟಕ್ಕೆ ಮುಂದಾಗಬೇಕಿದೆ. 2018 ರಿಂದ 2024 ರವರೆಗೆ ಆರು ವರ್ಷಗಳ ಕನಿಷ್ಠ ಕೂಲಿಯನ್ನು ಬೀಡಿ ಮಾಲೀಕರು ಈವರಗೆ ಪಾವತಿಸಿರುವುದಿಲ್ಲ. ಬೀಡಿ ಮಾಲೀಕರು ಈಗಾಗಲೇ ನೀಡಲು ಒಪ್ಪಿರುವ ಮೊತ್ತವನ್ನು ಪಾವತಿಸದೇ ವಿಳಂಬ ನೀತಿಯನ್ನು ಅಳವಡಿಸುತ್ತಿದೆ. (ಪ್ರತಿ ಸಾವಿರ ಬೀಡಿಗೆ 40 ರೂ. ನಂತೆ) ಒಟ್ಟು ಮೊತ್ತ 1000 ಕೋಟಿ ರೂಪಾಯಿಗೂ ಹೆಚ್ಚು ಪಾವತಿಸಬೇಕು. ಆದ್ದರಿಂದ ಈ ಮೊತ್ತವನ್ನು ಕೂಡಲೇ ಬೀಡಿ ಕಾರ್ಮಿಕರಿಗೆ ನೀಡಬೇಕು.

ಬೀಡಿ ಮಾಲಿಕರ ಪ್ರಸ್ತಾಪದಂತೆ ಕರ್ನಾಟಕ ರಾಜ್ಯ ಸರಕಾರ ಕನಿಷ್ಟ ಕೂಲಿಯ ಅಧಿಸೂಚನೆ ಹೊರಡಿಸಿದೆ. 2024 ಎಪ್ರಿಲ್ 1 ರಿಂದ ಸಾವಿರ ಬೀಡಿಗೆ ರೂ. 270 ಕನಿಷ್ಟ ಕೂಲಿ ಮತ್ತು ರೂ. 17.04 ರಂತೆ ತುಟ್ಟಿಭತ್ತೆಯನ್ನು ಪಾವತಿಸಬೇಕೆಂದು ಆದೇಶಿಸಿದ್ದರೂ ಬೀಡಿ ಮಾಲೀಕರು ಪಾವತಿಸಲಿಲ್ಲ. 2025 ರ ಎಪ್ರಿಲ್ 1 ರಿಂದ ಈ ವರ್ಷದ ಕನಿಷ್ಟ ಕೂಲಿಗೆ 2025ರಲ್ಲಿ ಏರಿಕೆಯಾಗಿದ್ದ ರೂ. 14.88 ಸೇರಿಸಿ ಒಟ್ಟು ರೂ. 301.92 ರಂತೆ ನೀಡಬೇಕಾದ ಮೊತ್ತವನ್ನು ಕಡಿತಗೊಳಿಸಿ ಬರೀ ರೂ. 284.88 ರಂತೆ ಮಜೂರಿಯನ್ನು ಪಾವತಿಸಿ ಬೀಡಿ ಕಾರ್ಮಿಕರಿಗೆ ವಂಚಿಸುತ್ತಿದ್ದಾರೆ. 2024 ರ ಏರಿಕೆಯಾದ ತುಟ್ಟಿಭತ್ತೆಯನ್ನು 2025 ರ ಕನಿಷ್ಟ ಕೂಲಿಗೆ ಸೇರ್ಪಡೆಗೊಳಿಸದೆ ಬೀಡಿ ಕಾರ್ಮಿಕರಿಗೆ ನೀಡದೆ ಮಾಲಿಕರು ಮೋಸ ಮಾಡುತ್ತಿದ್ದಾರೆ. ಆದುದರಿಂದ ತಾವು ಈ ಸಮಸ್ಯೆಯನ್ನು ಬಗೆ ಹರಿಸಿ ನ್ಯಾಯಯುತವಾಗಿ ಕಾರ್ಮಿಕರಿಗೆ ಸಿಗಬೇಕಾದ ಕನಿಷ್ಠ ಕೂಲಿ, ತುಟ್ಟಿ ಭತ್ಯೆಯನ್ನು ಸಿಗುವ ರೀತಿಯಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು. ನಂತರ ಸಚಿವರು ಮಾತನಾಡಿ ಬೀಡಿ ಕಾರ್ಮಿಕರ ಸಮಸ್ಯೆ ಕುರಿತು ಪ್ರತ್ಯೇಕ ಅಜೆಂಡಾ ಇಟ್ಟು ಕಾರ್ಮಿಕ ಸಂಘದ ಜೊತೆ ಜಂಟಿ ಸಭೆ ಮಾಡುವ ಭರವಸೆ ನೀಡಿದರು.

ಈ ಸಂದರ್ಭ ಮಾಜಿ ಸಚಿವರಾದ ವಿನಯ ಕುಮಾರ ಸೊರಕೆ, ಪ್ರಸಾದ್ ಕಾಂಚನ್, ಎಮ್.ಎ.ಗಪೂರ್ ಉಪಸ್ಥಿತರಿದ್ದರು. ಬೀಡಿ ಫೆಡರೇಶನ್ ಕಾರ್ಯದರ್ಶಿ ಉಮೇಶ್ ಕುಂದರ್, ಕೋಶಾಧಿಕಾರಿ ಕವಿರಾಜ್. ಎಸ್.ಕಾಂಚನ್, ಮುಖಂಡ ನಳಿನಿ.ಎಸ್., ಕಂಟ್ರಾಕ್ಟರ್ ಯುನಿಯನ್ ಮುಖಂಡ ಕ್ರಷ್ಣ ರೈ, ರವಿಪೂಜಾರಿ ಉಪಸ್ಥಿತರಿದ್ದರು.


