Thursday, October 23, 2025

spot_img

ಉಡುಪಿ ಜಿಲ್ಲಾ ಪೊಲೀಸರ ಕಾರ್ಯ‌ ಶ್ಲಾಘನೀಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಉಡುಪಿ: ಸಾರ್ವಜನಿಕರ ಹಿತದೃಷ್ಟಿಯಿಂದ ಉಡುಪಿ ನಗರ, ಗ್ರಾಮೀಣ ಪ್ರದೇಶ ಹಾಗೂ ಗಡಿ ಭಾಗಗಳಲ್ಲಿ ಸಿಸಿಟಿವಿ ಅವಳಡಿಕೆಗೆ ಮುಂದಾಗಿರುವ‌ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯ‌ ನಿಜಕ್ಕೂ ಶ್ಲಾಘನೀಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ‌ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಉಡುಪಿ ಚೆಂಬರ್ ಆಫ್ ಕಾಮರ್ಸ್  ಸಹಕಾರದೊಂದಿಗೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಅಳವಡಿಸಲು ಉದ್ದೇಶಿಸಲಾಗಿರುವ ಶ್ಯೇನ ದೃಷ್ಟಿ (ಸಿಸಿಟಿವಿ ಅಳವಡಿಕೆ) ಕೇಂದ್ರಕ್ಕೆ ಉಡುಪಿ ಸರ್ವೀಸ್ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿದ ಸಚಿವರು, ಸಿಸಿಟಿವಿ ಅಳವಡಿಕೆಯಿಂದ ಜಿಲ್ಲೆಯಲ್ಲಿ ಅಹಿತಕರ ಘಟನೆಗಳನ್ನು ತಡೆಗಟ್ಟಬಹುದು ಎಂದರು. 

ಜಿಲ್ಲೆಯ 207 ಜಂಕ್ಷನ್‌ಗಳಲ್ಲಿ 621 ನೈಟ್ ವಿಸನ್ ಕ್ಯಾಮೆರಾಗಳು ಮತ್ತು 10 ಜಿಲ್ಲಾ ಗಡಿ ರಸ್ತೆಗಳಲ್ಲಿ 20 ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ಯೋಜನೆಗೆ ಸುಮಾರು 2.50  ರಿಂದ 3 ಕೋಟಿ‌‌ ರೂಪಾಯಿ ವೆಚ್ಚವಾಗುತ್ತಿದ್ದು, ಇದನ್ನು ಸಂಪೂರ್ಣವಾಗಿ ಉಡುಪಿ ವಾಣಿಜ್ಯೋದ್ಯಮ ಮಂಡಳಿಯು  ನೀಡಿದೆ. ಇದಕ್ಕಾಗಿ ಚೆಂಬರ್ ಆಫ್ ಕಾಮರ್ಸ್ ಸಂಘಟನೆಗೆ ನಾನು ಜಿಲ್ಲಾಡಳಿತ ಮತ್ತು ಸರ್ಕಾರದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಚಿವರು ಹೇಳಿದರು. 

ದರ್ಶನ್ ವಿಚಾರ:  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಏಳು ಸಹಚರರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ ಸಚಿವರು, ನ್ಯಾಯಾಲಯ ತೀರ್ಪು ಕೊಟ್ಟ ನಂತರ ನಾವೆಲ್ಲರೂ ಅದಕ್ಕೆ ತಲೆಬಾಗಲೇಬೇಕು. ಸಂವಿಧಾನದಲ್ಲಿ ವಿಶ್ವಾಸ ಇರಿಸಿಕೊಂಡಿರುವ ನಾವೆಲ್ಲರೂ ತೀರ್ಪಿಗೆ ತಲೆಬಾಗಲೇಬೇಕು ಎಂದರು. 

 ರಾಜಣ್ಣ ವಜಾ: ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರನಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಮನವಿ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಅಧಿಕಾರವಿದೆ. ಆದರೆ ನಮ್ಮ ಪಕ್ಷ ಹೈಕಮಾಂಡ್ ಇರುವ ಪಕ್ಷ.‌ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಗಳಿಗೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಅದೇ ಫೈನಲ್ ಎಂದು ಹೇಳಿದರು. 

ಗೃಹಲಕ್ಷ್ಮಿ ಯೋಜನೆ ಹಣ ಸಂದಾಯ: ಗೃಹಲಕ್ಷ್ಮಿ ಯೋಜನೆಯ ಜೂನ್ ಹಾಗೂ ಜುಲೈ ತಿಂಗಳ ಹಣ ಬಿಡುಗಡೆಯಾಗಿರಲಿಲ್ಲ.  ಈಗ ಆ ಹಣವನ್ನ ಬಿಡುಗಡೆ ಮಾಡಿ ಉಡುಪಿಗೆ ಬಂದಿದ್ದೇನೆ. ಹಣ ಬಿಡುಗಡೆಯಾಗಿ ಸರಿಸುಮಾರು ಐದು ಆರು ದಿನಗಳು ಕಳೆದಿವೆ ಎಲ್ಲರಿಗೂ ಹಣ ತಲುಪಲಿದೆ. ಜೂನ್ ತಿಂಗಳಿನ ಬಾಕಿ ಹಣ ಸಂದಾಯವಾಗಿದೆ. ಜುಲೈ ಹಣ ಕೆಲವೇ ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಬರಲಿದೆ ಮುಂದಿನ ಗಣೇಶ ಚತುರ್ಥಿಯ ಒಳಗೆ ಗೃಹಲಕ್ಷ್ಮಿಯ ಜುಲೈ ತಿಂಗಳ ಹಣ ಬಿಡುಗಡೆ ಮಾಡಬೇಕೆನ್ನುವ ಆಸೆ ಇದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಈ ವೇಳೆ ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿ ರಾಮ್ ಶಂಕರ್‌ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles