ಉಡುಪಿ: ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಇದು ಜಾತಿ ಗಣತಿ ಅಲ್ಲವೇ ಅಲ್ಲ ಎಂದರು. ಮಾಡಿರುವ ಸಮೀಕ್ಷೆಯಲ್ಲಿ ಜಾತಿ ಒಂದು ಅಂಶ ಅಷ್ಟೇ. ಜನರು ಹೇಳಿರುವ ಜಾತಿಯನ್ನು ಬರೆದುಕೊಳ್ಳಲಾಗಿದೆ. ಜನರ ಜಾತಿಯನ್ನು ನಾವು ನಿರ್ಧರಿಸಲು ಆಗಲ್ಲ.ಮನೆಯವರು ಕೊಟ್ಟ ಜಾತಿಯನ್ನು ನಮೂದಿಸಲಾಗಿದೆಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.

ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದರ ನಡುವೆ ನಾವು ಒಂದು ಮಧ್ಯಂತರ ವರದಿ ನೀಡಿದ್ದೆವು. ಹಿಂದಿನ ಸರಕಾರ ಮಧ್ಯಂತರ ವರದಿಯಲ್ಲಿ ಅನೇಕ ಅಂಶಗಳನ್ನು ಸ್ವೀಕರಿಸಿದೆ. ಸುಪ್ರೀಂಕೋರ್ಟಿಗೆ ಹೋದ ಕಾರಣ ಜಾರಿ ಮಾಡುವುದಿಲ್ಲ ಎಂದಿದ್ದರು. ಆಗ ಒಪ್ಪಿದ ವರದಿಯನ್ನು ಈಗ ನಿರಾಕರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬಿಜೆಪಿ ಸರಕಾರ ಇದ್ದಾಗಲೇ ಸದಸ್ಯರನ್ನು ನೇಮಕ ಮಾಡಿದ್ದರು. ಬಿಜೆಪಿಯಲ್ಲಿ ಇದ್ದವರನ್ನೇ ಆಯ್ಕೆ ಮಾಡಿದ್ದರು. ಈ ಸಮಿತಿ ಮಾಡಿರುವುದು ಕಾಂಗ್ರೆಸ್ ಸರ್ಕಾರ ಅಲ್ಲ ಎಂದೂ ತಿಳಿಸಿದರು. ಜಾತಿ ಗಣತಿ ವರದಿಯಲ್ಲಿ ರಾಜ್ಯದಲ್ಲಿ ಎಷ್ಟು ಜಾತಿಗಳಿವೆಯೋ ಎಲ್ಲವನ್ನೂ ಒಳಗೊಳ್ಳಲಾಗಿದೆ. ಸಂಖ್ಯೆ ಎಷ್ಟು ಎಂದು ಈಗ ನಾನು ಹೇಳಲು ಸಾಧ್ಯವಿಲ್ಲ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ವರದಿ ಜಾರಿ ಆಗಬೇಕು ಎಂದು ನಾನು ಹಾರೈಸುತ್ತೇನೆ. ಸಾಕಷ್ಟು ಪ್ರಯತ್ನದ ನಂತರ ವರದಿ ತಯಾರಿಸಲಾಗಿದೆ. ಜನರ ಮನಸ್ಸಿನಲ್ಲಿರುವ ಅನುಮಾನ ದೂರಗೊಳ್ಳಲು ವರದಿ ಸಾರ್ವಜನಿಕಗೊಳ್ಳಬೇಕು ಎಂದರು.
ವರದಿ ಕುರಿತು ಸಂಪುಟದಲ್ಲಿ ಚರ್ಚೆ ಆದ ನಂತರ ಹೇಳಿಕೆ ಕೊಡೋಣ ಎಂದು ಇದ್ದೆ. ಆದರೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಗೊಂದಲ ಉಂಟಾಗಿರುವುದರಿಂದ ಸ್ಪಷ್ಟನೆ ನೀಡಬೇಕಾಗಿದೆ. ಸಮೀಕ್ಷೆ ವೇಳೆ ನಾವು ಜಾತಿ ಹೇಳುವುದಿಲ್ಲ ಎಂದು ಕೆಲವರು ಹೇಳಿದ್ದಾರೆ. ಜಾತಿಯ ಬಗ್ಗೆ ಮಾಹಿತಿ ಇಲ್ಲದ ಕೆಲವರು ಇದ್ದಾರೆ. ಅಂತಹ ಸುಮಾರು ಐನೂರು ಜಾತಿಗಳು ಸಿಕ್ಕಿವೆ. ನಮ್ಮ ಜಾತಿಯ ಸಮೀಕ್ಷೆ ಆಗಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದರು. ನಮ್ಮ ಜಾತಿಯ ಸಂಖ್ಯೆ ಕಡಿಮೆಯಾಗಿದೆ ಎಂದು ಕೆಲವರು ಹೇಳುತ್ತಾರೆ. ರಾಜ್ಯದಿಂದ ಹೊರಗುಳಿದವರು ಈ ಲೆಕ್ಕಾಚಾರದಲ್ಲಿ ಬರಲ್ಲ. ಲಿಂಗಾಯತರು ಈ ಬಗ್ಗೆ ದೂರಿದ್ದಾರೆ. ಲಿಂಗಾಯಿತ ಎಂದು ಹೇಳುವ ಬದಲು ಹಿಂದೂ ಗಾಣಿಗ ಎಂದು ಕೆಲವರು ಕೊಟ್ಟಿದ್ದಾರೆ. ಸಮೀಕ್ಷೆ ಮಾಡುವಾಗ ಯಾರು ಏನು ಹೇಳಿದ್ದಾರೋ ಗೊತ್ತಿಲ್ಲ. ಅಧಿಕಾರಿಗಳಿಗೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ತಪ್ಪಿದ್ದರೆ ದೂರು ಕೊಟ್ಟು ಸರಿಪಡಿಸಬಹುದು ಎಂದರು.

ಈ ವರದಿ ಜಾರಿ ಮಾಡಲು ಆಗದಿದ್ದರೆ ಮರು ಸಮೀಕ್ಷೆ ಮಾಡಿ ಏನು ಪ್ರಯೋಜನ.ಇದು ವೈಜ್ಞಾನಿಕವಾಗಿ ಆದ ವರದಿ, ಏನು ತೊಂದರೆ ಇಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮೀಕ್ಷೆಯಾಗಿದೆ. ಭಾರತ್ ಎಲೆಕ್ಟ್ರಾನಿಕ್ಸ್ ನವರು ವರದಿ ಅಪ್ಲೋಡ್ ಮಾಡಿದ್ದಾರೆ. ಅವರು ಯಾರಿಗೂ ಪಾಸ್ವರ್ಡ್ ಕೊಡುವುದಿಲ್ಲ ಎಂದರು. ವರದಿ ಸಾರ್ವಜನಿಕಗೊಂಡ ನಂತರ ಚರ್ಚೆ ಮಾಡಬಹುದು.ವರದಿಯಲ್ಲಿ ತಪ್ಪಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಇದೆ. ತಪ್ಪಾಗಿದ್ದರೆ ಸರಿ ಮಾಡುತ್ತೇವೆ ಎಂದು ಸರಕಾರ ಹೇಳಿದೆ. ಶೇ 95 ರಷ್ಟುಸರಿ ಇದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಏನನ್ನೂ ನೋಡದೆ ಇದು ವೈಜ್ಞಾನಿಕ ವರದಿ ಅಲ್ಲ ಎನ್ನಬಾರದು ಎಂದರು. ಸಿದ್ದರಾಮಯ್ಯನವರು ಕೂತುಕೊಂಡು ವರದಿ ಬರೆಸಿದ್ದಾರೆ ಎನ್ನುವುದು ಸರಿಯಲ್ಲ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಯಾ ಜಿಲ್ಲಾಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ಪ್ರತಿ ಹಳ್ಳಿಗಳಲ್ಲಿ ತರಬೇತಿಗೊಂಡ ಶಿಕ್ಷಕರು ಹೋಗಿ ಸಮೀಕ್ಷೆ ಮಾಡಿದ್ದಾರೆ ಎಂದು ಹೇಳಿದರು. ಯಾವ ಶಿಕ್ಷಕರಿಗೂ ವೈಯಕ್ತಿಕ ಆಸಕ್ತಿ ಇರಲು ಸಾಧ್ಯವಿಲ್ಲ. ನೀಡಿರುವ ನಮೂನೆಯನ್ನು ತುಂಬಿಸಿಕೊಂಡು ಬಂದಿದ್ದಾರೆ. ಇದು ಖಾಸಗಿ ಅವರು ತಯಾರಿಸಿದ ವರದಿಯಲ್ಲ. ಮೊದಲು ಸಚಿವ ಸಂಪುಟ ವರದಿ ಬಗ್ಗೆ ಚರ್ಚೆ ಮಾಡಲಿ ಎಂದು ಹೇಳಿದರು.


