Thursday, March 5, 2026

spot_img

ಇಂಡಿಯನ್ ಸ್ಟ್ರೇಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ ಮೇಲೆ ಡ್ರೋನ್ ಧಾಳಿ ?!!

ಉಡುಪಿ : ಕಾಪು ಹೊರವಲಯದ ಪಾದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಇಂಡಿಯನ್ ಸ್ಟ್ರೇಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐ.ಎಸ್.ಪಿ.ಆರ್.ಎಲ್) ಮೇಲೆ ಡ್ರೋನ್ ಮೂಲಕ ಸಿಡಿಮದ್ದು (ಬಾಂಬ್) ದಾಳಿಯಾದ ಹಿನ್ನೆಲೆ, ಕಂಪನಿ ಮುಂಭಾಗದ ಹೊರಭಾಗದಲ್ಲಿ ಹಾಗೂ ಒಳಭಾಗದಲ್ಲಿ ಬೆಂಕಿಯು ಸಂಜೆ ಸುಮಾರು 4 ಗಂಟೆಗೆ ಕಾಣಿಸಿಕೊಂಡಿತು.ಬಾಂಬ್ ಸ್ಪೋಟದಿಂದ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ, ತಕ್ಷಣದಲ್ಲಿಯೇ ಸೈರನ್ ಮೊಳಗಿ ಎಚ್ಚರಿಕೆ ಗಂಟೆ ಬಾರಿಸಲಾಗಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿಯನ್ನು ನೀಡಲಾಯಿತು. ಐ.ಎಸ್.ಪಿ.ಆರ್.ಎಲ್ ನ ಬೆಂಕಿ ನಂದಕ ವಾಹನವು ಕಂಪನಿಯ ಒಳಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಆರಿಸಲು ಕಾರ್ಯವನ್ನು ಪ್ರಾರಂಭಿಸಿದರು. ಕೆಲವೇ ಕ್ಷಣಗಳಲ್ಲಿ ಅದಾನಿ ಕಂಪನಿಯ ಫೈರಿಂಜಿನ್ ಹೊರಭಾಗದ ಬೆಂಕಿ ನಂದಿಸುವ ಕಾರ್ಯವನ್ನು ಕೈಗೊಂಡು, ಮೊದಲ ಹಂತದಲ್ಲಿ ನಾಲ್ಕರಿಂದ ಐದು ನಿಮಿಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬೆಂಕಿಯನ್ನು ನಂದಿಸಿ, ಕಂಪನಿಯ ಒಳಭಾಗದ ಬೆಂಕಿ ನಂದಿಸಲು ಮುಂದಾದರು. ಕಾರ್ಕಳದ ಅಗ್ನಿ ಶಾಮಕ ವಾಹನವು ಕಾರ್ಯಾಚರಣೆಯಲ್ಲಿ ಕೈಜೋಡಿಸಿತು.

ಕಾಪು ಪೊಲೀಸ್ ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ, ತುರ್ತು ಕಾರ್ಯಾಚರಣೆ ಕೈಗೊಳ್ಳಲು ಮುಂದಾದರು. ಕಂಪನಿಯ ಒಳಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ 35 ಜನರಿಗೆ ತೀವ್ರ ತರಹದ ಹಾಗೂ ಸಾಮಾನ್ಯ ಗಾಯಗಳು ಉಂಟಾಗಿದ್ದು, ಅವರುಗಳನ್ನು ಸ್ಪೋಟಗೊಂಡ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯಗಳನ್ನು ಕಂಪನಿಯ ಇತರೆ ಕೆಲಸಗಾರರು ಮುಂದಾದರು ಹಾಗೂ ಕೂಡಲೇ ಪೊಲೀಸ್ ತಂಡವು ಘಟನಾ ಸ್ಥಳದ ಸುತ್ತಮುತ್ತ ಹಾಗೂ ಇತರೆ ಅಗತ್ಯ ಸ್ಥಳಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡಿದರು. ಕಾಪುವಿನ ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಒಳಗೊಂಡ ತಂಡವು ಘಟನಾ ಸ್ಥಳಕ್ಕೆ ಕೂಡಲೇ ಭೇಟಿ ನೀಡಿ, ಚಿಕಿತ್ಸೆಯ ಆದ್ಯತೆಯ ಮೇಲೆ ರಕ್ಷಣೆ ಮಾಡಲಾಯಿತು. ಪ್ರಾಥಮಿಕ ಚಿಕಿತ್ಸೆಗಳನ್ನು ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಅವರುಗಳನ್ನು ಆಂಬುಲೆನ್ಸ್ಗಳ ಮೂಲಕ ಹತ್ತಿರದ ಆಸ್ಪತ್ರೆಗೆ ರವಾನಿಸಿದರು.

ಬಾಂಬ್ ನಿಷ್ಕ್ರೀಯ ದಳದವರು ಶ್ವಾನದೊಂದಿಗೆ ಆಗಮಿಸಿ, ಸ್ಥಳದಲ್ಲಿ ಸಜೀವ ಬಾಂಬ್‌ಗಳ ಇರುವಿಕೆಯ ಬಗ್ಗೆ ಪರಿಶೀಲನಾ ಕಾರ್ಯಗಳನ್ನು ಕೈಗೊಂಡರು. ಕ್ವಿಕ್ ರಿಯಾಕ್ಷನ್ ಫೋರ್ಸ್ನ ತಂಡದವರು ಆಗಮಿಸಿ, ಸುರಕ್ಷತೆಗೆ ಸನ್ನದ್ಧರಾದರು. ಪ್ರಕರಣ ಆದ 40 ನಿಮಿಷದ ಒಳಗಾಗಿ ಮಂಗಳೂರಿನ ಎಸ್.ಡಿ.ಆರ್.ಎಫ್ ತಂಡವು ಆಗಮಿಸಿ, ಗಾಯಾಳುಗಳನ್ನು ಸ್ಥಳಾಂತರದ ಕಾರ್ಯಗಳು ಸೇರಿದಂತೆ ಮತ್ತಿತರ ಪ್ರಥಮ ಚಿಕಿತ್ಸೆಯನ್ನು ನೀಡಿದರು. ಘಟನಾ ಸ್ಥಳದಲ್ಲಿ ಎರಡು ಜನ ಮರಣ ಸಂಭವಿಸಿದರೆ, 12 ಜನ ಚಿಕಿತ್ಸೆಗಾಗಿ ಕಾಪುವಿನ ಆಸ್ಪತ್ರೆಗೆ ಹಾಗೂ 20 ಜನರನ್ನು ಶಿರ್ವದ ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಯಿತು. ಒಬ್ಬರ ಬಗ್ಗೆ ಸಂಪೂರ್ಣ ಮಾಹಿತಿ ದೊರಕಿರುವುದಿಲ್ಲ. ಇವರು ಸದ್ಯ ಐ.ಸಿ.ಯು ನಲ್ಲಿ ಇರುವುದಾಗಿ ತಿಳಿದುಬಂದಿದೆ. ಸದರಿ ಘಟನಾ ಪ್ರದೇಶದ ಹತ್ತಿರದಲ್ಲಿ ವಾಸಿಸುವ ಸಾರ್ವಜನಿಕರನ್ನು ಹತ್ತಿರದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಕಂದಾಯ ಇಲಾಖೆಯ ತಂಡ ಮುಂದಾಗಿತ್ತು.

ಇವುಗಳ ಮಧ್ಯೆಯೂ ಎರಡನೇ ಬಾರಿ ಡ್ರೋನ್ ಮೂಲಕ ಆಕ್ರಮಣವನ್ನು ಮಾಡಲು ಮುಂದಾದಾಗ ಡ್ರೋನ್ ದಾಳಿಯು ನಿಖರ ಗುರಿಯನ್ನು ತಪ್ಪಿಸಿ, ಐ.ಎಸ್.ಪಿ.ಆರ್.ಎಲ್ ನ ಗೇಟ್‌ನ ಬಳಿ ಬಿದ್ದಿದ್ದು ಹೆಚ್ಚು ಹಾನಿಯಾಗಿರುವುದಿಲ್ಲ. ಡಿ.ಎ.ಆರ್. ಕ್ವಿಕ್ ರೆಸ್ಪಾನ್ಸ್ ಟೀಮ್ ನವರು ಅದನ್ನು ಗೇಟ್‌ ಬಳಿಯೇ ನಿಷ್ಕ್ರಿಯ ಮಾಡಿದರು. ಸಂಜೆ 4.55 ರ ಸಮಯಕ್ಕಾಗಲೇ ಬೆಂಕಿ ನಂದಿಸುವ ಕಾರ್ಯವು ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಘಟನಾ ಸ್ಥಳಕ್ಕೆ ಬಂದು ಗಾಯಾಳುಗಳನ್ನು ಭೇಟಿ ಮಾಡಿ, ನಂತರ ಸ್ಪೋಟಗೊಂಡು ಘಟನಾ ಸ್ಥಳ ಪರಿಶೀಲನೆ ಮಾಡಿದರು. ಸಂಜೆ 5.33 ರ ಹೊತ್ತಿಗಾಗಲೇ ಘಟನಾ ಪರಿಸ್ಥಿತಿಯು ಪೂರ್ಣಪ್ರಮಾಣದಲ್ಲಿ ಹತೋಟಿಗೆ ಬರುವುದರೊಂದಿಗೆ ಅಣುಕು ಪ್ರದರ್ಶನವು ಮುಕ್ತಾಯಗೊಂಡಿತು.

ಒಂದೆಡೆ ಡ್ರೋನ್ ಮೂಲಕ ಸ್ಪೋಟಕಗಳ ಮೂಲಕ ಸ್ಪೋಟ, ಇನ್ನೊಂದೆಡೆ ಬೆಂಕಿ ಅನಾಹುತದ ಸಂದರ್ಭವನ್ನು ಸೃಷ್ಠಿಸಿ ಆಪರೇಷನ್ ಅಭ್ಯಾಸದ ಮೂಲಕ ಕಾಲ್ಪನಿಕ ತುರ್ತು ಪರಿಸ್ಥಿತಿ ಸೃಷ್ಠಿಸಿ, 270 ಕ್ಕೂ ಹೆಚ್ಚು ಸಿಬ್ಬಂದಿಗಳು ಸೇರಿ ತಾಲೀಮು ನಡೆಸಿದರು. ಆಪರೇಷನ್ ಅಭ್ಯಾಸ್ ರಕ್ಷಣಾ ಕಾರ್ಯಚರಣೆಯಲ್ಲಿ ರೆವಿನ್ಯೂ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಕೈಗಾರಿಕಾ ಭದ್ರತಾ ಪಡೆ, ಕೋಸ್ಟಲ್ ಸೆಕ್ಯೂರಿಟಿ ಫೋರ್ಸ್, ಆರ್.ಟಿ.ಓ, ಆರೋಗ್ಯ ಇಲಾಖೆ, ಮೆಸ್ಕಾಂ, ಎಸ್.ಡಿ.ಆರ್.ಎಫ್ ತಂಡ, ಗೃಹರಕ್ಷಕದಳದವರು, ಐ.ಎಸ್.ಪಿ.ಆರ್.ಎಲ್ ನ ರಕ್ಷಣಾ ಸಿಬ್ಬಂದಿಗಳು ಹಾಗೂ ಮತ್ತಿತರರು ಭಾಗವಹಿಸಿದ್ದರು.

ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಎಎಸ್‌ಪಿ ಪಿ.ಎ ಹೆಗಡೆ, ಸಹಾಯಕ ಕಮೀಷನರ್ ರಶ್ಮಿ ಎಸ್, ಐ.ಎಸ್.ಪಿ.ಆರ್.ಎಲ್ ನ ಮುಖ್ಯ ಸೈಟ್ ಇನ್‌ಚಾರ್ಜರ್ ಜಿ.ಕೆ ಯುವರಾಜ್, ಕಾಪು ತಹಶೀಲ್ದಾರ್ ಪ್ರತಿಭಾ, ಮೆಸ್ಕಾಂ ಅಧೀಕ್ಷಕ ದಿನೇಶ್ ಉಪಾಧ್ಯಾಯ, ಜಿಲ್ಲಾ ಆರ್.ಟಿ.ಓ ಅಧಿಕಾರಿ ಎಲ್.ಪಿ ನಾಯಕ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ರವಿ ಓಜನಾಹಳ್ಳಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು

ಪ್ರಕೃತಿ ವಿಕೋಪ ಹಾಗೂ ಮಾನವ ನಿರ್ಮಿತ ವಿಪತ್ತುಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಆಪರೇಷನ್ ಅಭ್ಯಾಸ್ ಅಣುಕು ಪ್ರದರ್ಶನವನ್ನು ಐ.ಎಸ್.ಪಿ.ಆರ್.ಎಲ್ ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ. ಇಂದು ನಡೆದ ಅಣುಕು ಪ್ರದರ್ಶನದಲ್ಲಿ ಡ್ರೋನ್ ದಾಳಿಯ ಸಂದರ್ಭದಲ್ಲಿ ಮಾನವನ ರಕ್ಷಣೆ ಹಾಗೂ ಸ್ಥಾವರಗಳ ರಕ್ಷಣೆ ಕೈಗೊಳ್ಳುವ ಕುರಿತು ನಡೆಸಲಾಗಿತ್ತು. ರಕ್ಷಣಾ ಕಾರ್ಯದಲ್ಲಿ ಪ್ರತಿಯೊಂದು ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನೆರವೇರಿಸುವುದರೊಂದಿಗೆ ಪರಿಸ್ಥಿತಿಯನ್ನು ಅಲ್ಪಕಾಲದಲ್ಲಿಯೇ ಹತೋಟಿಗೆ ತಂದು ರಕ್ಷಣೆಯನ್ನು ಒದಗಿಸಿದರು. ಈ ರೀತಿಯ ಆಪರೇಷನ್ ಅಭ್ಯಾಸದ ಉದ್ದೇಶ ವಿಕೋಪ ಸಂಕಷ್ಟ ಪರಿಸ್ಥಿತಿಯಲ್ಲಿ ಪ್ರಾಣಹಾನಿ ಹಾಗೂ ಆಸ್ತಿ ಹಾನಿ ತಡೆಗಟ್ಟುವುದರ ಜೊತೆಗೆ ರಕ್ಷಣೆ ಒದಗಿಸುವುದೇ ಮುಖ್ಯ ಉದ್ದೇಶ ಎಂದ ಅವರು, ಘಟನೆ ನಡೆದ 40 ನಿಮಿಷದ ಒಳಗಾಗಿ ಮಂಗಳೂರಿನ ಎಸ್.ಡಿ.ಆರ್.ಎಫ್ ತಂಡವು ಆಗಮಿಸಿ, ರಕ್ಷಣಾ ಕಾರ್ಯದಲ್ಲಿ ಕೈಗೊಂಡಿರುವುದು ವಿಶೇಷವಾಗಿತ್ತು.
ಡಾ.ಕೆ ವಿದ್ಯಾಕುಮಾರಿ (ಜಿಲ್ಲಾಧಿಕಾರಿಗಳು)

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles