ಉಡುಪಿ : ಆರ್ಎಸ್ಎಸ್ ತನ್ನ ಹೆಸರಿನಂತೆ ರಾಷ್ಟ್ರೀಯ ಸೇವೆ ಮಾಡುತ್ತಿದೆ. ಯಾವುದೇ ವ್ಯವಸ್ಥೆಯಲ್ಲಿ ಕೆಲವು ತಪ್ಪುಗಳು ಕಾಣಿಸಿಕೊಳ್ಳುವುದು ಸಹಜ. ತಪ್ಪುಗಳಿದ್ದರೆ ವಿಮರ್ಶಿಸಿ ಸರಿಪಡಿಸಬೇಕು. ಒಬ್ಬರಿಗೆ ಸರಿ ಎನ್ನಿಸುವುದು ಮತ್ತೊಬ್ಬರಿಗೆ ತಪ್ಪು ಎಂದು ಭಾಸವಾಗಬಹುದು. ಆದರೆ, ನೂರು ವರ್ಷಗಳಿಂದ ಸಂಘ ಮಾಡುತ್ತಿರುವ ದೇಶಸೇವೆ ಮತ್ತು ಅದರ ಪರಿಣಾಮವನ್ನು ಗಮನಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅವರು ಆರ್ಎಸ್ಎಸ್ ನಿಷೇಧ ಕುರಿತಾಗಿ ನಡೆದಿರುವ ಚರ್ಚೆಯ ಹಿನ್ನೆಲೆಯಲ್ಲಿ ಮಾತನಾಡುತ್ತಾ, ಮಾನ್ಯ ಖರ್ಗೆಯವರು ತಮ್ಮ ಅಭಿಪ್ರಾಯವನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ಅಭಿಪ್ರಾಯ ತಿಳಿಸುವ ಹಕ್ಕು ಅವರಿಗೆ ಖಂಡಿತವಾಗಿದೆ. ಮುಖ್ಯಮಂತ್ರಿಗಳು ಎಲ್ಲರೊಂದಿಗೆ ಚರ್ಚಿಸಿ ಯೋಗ್ಯವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಆರ್ಎಸ್ಎಸ್ ಮಾಡಿದ ಸೇವೆ ಯಾರು ಅಲ್ಲಗಳೆಯಲು ಸಾಧ್ಯವಿಲ್ಲ. ಮುಂದೆಯೂ ಆರ್ಎಸ್ಎಸ್ ಸೇವಾಕಾರ್ಯ ಮುಂದುವರಿಯುತ್ತದೆ, ಸರಕಾರ ಯಾವುದೇ ನಿರ್ಧಾರ ಕೈಗೊಳ್ಳುವಾಗ ಸಮಾಜಕ್ಕೆ ಆಗುವ ಲಾಭ–ನಷ್ಟಗಳನ್ನು ಪರಿಗಣಿಸಬೇಕು. ನೂರು ವರ್ಷ ಪೂರೈಸಿರುವ ಆರ್ಎಸ್ಎಸ್ ನಿಷೇಧಿಸುವುದು ಸರಿಯಲ್ಲ. ಮೂಗು ಸೋರುತ್ತಿದೆ ಎಂದು ಅದನ್ನು ಕಿತ್ತೆಸೆಯುವುದಿಲ್ಲವಲ್ಲ ಹಾಗೆಯೇ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಎಲ್ಲವೂ ಸುಖಾಂತವಾಗಲಿ ಎಂದರು.

ಅಯೋಧ್ಯೆಯಲ್ಲಿ ಧ್ವಜಾರೋಹಣ ಸಿದ್ಧತೆ
ಸ್ವಾಮೀಜಿ ಅಯೋಧ್ಯೆಯ ಕಾರ್ಯಕ್ರಮಗಳ ಕುರಿತು ಮಾತನಾಡಿ, “ನವೆಂಬರ್ 25ರಂದು ಅಯೋಧ್ಯೆಯಲ್ಲಿ ತ್ರಿವರ್ಣ ಧ್ವಜಾರೋಹಣ ನಡೆಯಲಿದೆ. ದೇವಾಲಯದ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದ್ದು, ಸಮಾರೋಪ ಕಾರ್ಯಕ್ರಮದಲ್ಲಿ ಮಂದಿರವನ್ನು ಶ್ರೀ ರಾಮ ದೇವರಿಗೆ ಅರ್ಪಿಸಲಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿ ಧ್ವಜಾರೋಹಣ ಮಾಡಲಿದ್ದಾರೆ. ಪೂರ್ವಭಾವಿ ಪೂಜಾ ಕಾರ್ಯಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.
