ಉಡುಪಿ: ಆನ್ ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ಲಾಭಾಂಶದ ಅಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ನಾಲ್ವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಮೊಹಮದ್ ಕೈಸ್(20), ಅಹಮದ್ ಅನ್ವಿಜ್(20), ಸಜ್ವಾನ್(30) ಮತ್ತು ತಾಸೀರ್(31) ಬಂಧಿತ ಆರೋಪಿಗಳು. ಜೊಸ್ಸಿ ರವೀಂದ್ರ ಡಿಕ್ರೂಸ್(54) ವಂಚನೆಗೆ ಒಳಗಾದವರು.

ಜೊಸ್ಸಿ ರವೀಂದ್ರ ಡಿಕ್ರೂಸ್ ಇವರಿಗೆ ಫೇಸ್ ಬುಕ್ ಮೂಲಕ ಆರೋಹಿ ಅಗರ್ವಾಲ್ ಎಂಬ ಮಹಿಳೆಯ ಪರಿಚಯವಾಗಿದ್ದು 2025ರ ಫೆಬ್ರವರಿ ತಿಂಗಳಲ್ಲಿ ಅವಳ ವಾಟ್ಸಾಪ್ ನಂಬ್ರವನ್ನು ನೀಡಿದ್ದಳು. ಎಫ್ ಎಕ್ಸ್ ಸಿ ಐ ಎಂ ಗೋಲ್ಡ್ ಟ್ರೇಡಿಂಗ್ ಗೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ಮೆಸೇಜ್ ಮಾಡಿ ನಂಬಿಸಿದ್ದಳು. ಅದನ್ನು ನಂಬಿದ ಜೊಸ್ಸಿ ರವೀಂದ್ರ, ತಮ್ಮ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 75,00,000 ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ. ತಮಗೆ ಮೋಸವಾಗಿರುವ ಕುರಿತು ಜೊಸ್ಸಿ ರವೀಂದ್ರ ಡಿಕ್ರೂಸ್ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ತಂಡ ರಚಿಸಿ ತನಖೆ ನಡೆಸಿದ ಉಡುಪಿ ಸೆನ್ ಪೊಲೀಸ್ ರು ಆರೋಪಿಗಳನ್ನು ಬಂಧಿಸಿ, ಅವರಿಂದ 4,00,000 ರೂ. ನಗದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


