ಉಡುಪಿ : ದೇಶದ ಯಾವುದೇ ಪ್ರದೇಶದಲ್ಲಿ ಪ್ರಾಕೃತಿಕ ವಿಕೋಪಗಳಿಂದ ಜನರಿಗೆ ತೊಂದರೆಯಾದಾಗ ಸಂಘವು ಅವರಿಗೆ ತನ್ನ ಸಹಾಯ ಹಸ್ತ ಚಾಚಿದೆ. ಕಳೆದ ಎರಡು ದಶಕಗಳಲ್ಲಿ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಶಾಲೆಗಳಿಗೆ, ಆಸ್ಪತ್ರೆ, ವೃದ್ದರು ಮತ್ತು ಅಶಕ್ತರಿರುವ ಆಶ್ರಮಗಳಿಗೆ ಸಂಘದ ಸದಸ್ಯರಿಂದ ಮತ್ತು ಹಿತೈಷಿಗಳಿಂದ ಧನಸಂಗ್ರಹ ಮಾಡಿ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲಾಗಿದೆ ಎಂದು ವಿಮಾ ನೌಕರರ ಸಂಘ, ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ. ವಿಶ್ವನಾಥ ಹೇಳಿದರು.

ಅವರು ಉಡುಪಿ ಜಿಲ್ಲಾಸ್ಪತ್ರೆ ರಕ್ತ ನಿಧಿ ವಿಬಾಗದಲ್ಲಿ ಆಯೋಜಿಸಲಾದ ಅಖಿಲ ಭಾರತ ವಿಮಾ ನೌಕರರ ಸಂಘದ 75ನೇ ವರ್ಷಾಚರಣೆಯ ಅಂಗವಾಗಿ ವಿಮಾ ನೌಕರರ ಸಂಘ, ಉಡುಪಿ ವಿಭಾಗವು ರಕ್ತ ನಿಧಿ, ಜಿಲ್ಲಾ ಆಸ್ಪತ್ರೆ, ಉಡುಪಿ ಇವರ ಸಹಯೋಗದೊಂದಿಗೆ ಆಯೋಜಿಸಲಾದ ರಕ್ತದಾನ ಶಿಬಿರವನ್ನುದ್ದೇಶಿಸಿ ಮಾತನಾಡುತ್ತಾ, ವಿಮಾ ನೌಕರರ ಸಂಘ, ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ. ವಿಶ್ವನಾಥ ಅವರು ಮಾತನಾಡಿ, ವಿಮಾ ನೌಕರರ ಸೇವಾ ಸವಲತ್ತು ಮತ್ತು ಸೇವಾ ಪರಿಸ್ಥಿತಿಗಳ ಸುಧಾರಣೆ ಬೇಡಿಕೆಯ ಜೊತೆ ವಿಮಾ ರಾಷ್ಟ್ರೀಕರಣದ ಬೇಡಿಕೆಯೊಂದಿಗೆ 1951 ರ ಜುಲೈ 1 ರಂದು ಅಖಿಲ ಭಾರತ ವಿಮಾ ನೌಕರರ ಸಂಘವು ಸ್ಥಾಪನೆಯಾಯಿತು ಮತ್ತು ಕಳೆದ 74 ವರ್ಷಗಳಲ್ಲಿ ತನ್ನ ದ್ಯೇಯೋದ್ಧೇಶಗಳನ್ನು ಈಡೇರಿಸಿಕೊಳ್ಳುವುದರ ಜೊತೆಗೆ ವಿಮಾ ನೌಕರರಲ್ಲಿ ಸಮಾನತೆ ಮತ್ತು ಸೌಹಾರ್ದತೆಯನ್ನು ಬೆಳೆಸಿದೆ ಎಂದರು.

ವೇದಿಕೆಯಲ್ಲಿ ಭಾರತೀಯ ಜೀವ ವಿಮಾ ನಿಗಮ, ಉಡುಪಿ ವಿಭಾಗದ ಔದ್ಯೋಗಿಕ ಮತ್ತು ಮಾನವ ಸಂಬಂಧ ಪ್ರಬಂಧಕರ ಎಂ. ಲಕ್ಷ್ಮೀ ನಾರಾಯಣ, ರಕ್ತ ನಿಧಿಯ ಮುಖ್ಯಸ್ಥರಾದ ಡಾ| ವೀಣಾ ಕುಮಾರಿ ಎಂ., ವಿಮಾ ನೌಕರರ ಸಂಘದ ಅಧ್ಯಕ್ಷರಾದ ಪ್ರಭಾಕರ ಬಿ.ಕುಂದರ್, ಭಾರತೀಯ ಜೀವ ವಿಮಾ ನಿಗಮ, ಉಡುಪಿ ವಿಭಾಗದ ಕಾನೂನು ಮತ್ತು ಗೃಹ ಸಾಲದ ಪ್ರಬಂಧಕ ಅನ್ವರ್ ಸಾದತ್ ಉಪಸ್ಥಿತರಿದ್ದರು. ಈ ಶಿಬಿರದಲ್ಲಿ 26 ಜನ ರಕ್ತದಾನ ಮಾಡಿದರು.


